ಮುಂಬೈ, ಮಹಾರಾಷ್ಟ್ರ:ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನ ಪರಿಷತ್ನ ಮೊದಲ ದಿನವಾದ ಇಂದು ಉಪಸಭಾಪತಿ ಸ್ಥಾನದ ವಿಚಾರವಾಗಿ ವಾಗ್ವಾದ ನಡೆಯಿತು . ಅಜಿತ್ ಪವಾರ್ ಅವರ ಗುಂಪು ಅಧಿಕಾರಕ್ಕೆ ಬಂದ ಮೇಲೆ ಹಲವು ರಾಜಕೀಯ ಸಮೀಕರಣಗಳು ಬದಲಾಗಿವೆ. ವಿಧಾನ ಪರಿಷತ್ ಉಪಸಭಾಪತಿ ನೀಲಂ ಗೋರ್ಹೆ ಅವರು ಉದ್ಧವ್ ಠಾಕ್ರೆ (ಉಬಾತ) ಶಿವಸೇನೆ ತೊರೆದು ಶಿಂಧೆ ಗುಂಪಿಗೆ ಸೇರಿದ್ದಾರೆ. ಇಂದು ಅವರ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು ವಿಧಾನ ಪರಿಷತ್ತಿಗೆ ಮುತ್ತಿಗೆ ಹಾಕಿ ಸದನದಿಂದ ನಿರ್ಗಮಿಸಿದವು.
ಜಯಂತ್ ಪಾಟೀಲ್ ಪ್ರಸ್ತಾಪಿಸಿದ ವಿಚಾರ:ಅಜಿತ್ ಪವಾರ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ರಾಜಕೀಯ ಸಮೀಕರಣಗಳು ಸಂಪೂರ್ಣ ಬದಲಾಗಿವೆ. ಅದರಲ್ಲೂ ಆಡಳಿತಾರೂಢ ಶಾಸಕರ ಸಂಖ್ಯೆ ಹೆಚ್ಚಿದ್ದರೂ ಪ್ರತಿಪಕ್ಷಗಳು ಈ ಬಾರಿಯ ಅಧಿವೇಶನದಲ್ಲಿ ಆಡಳಿತ ಪಕ್ಷಕ್ಕೆ ಸವಾಲೊಡ್ಡಲು ಹಲವು ಸಮಸ್ಯೆಗಳಿವೆ. ಉಪ ಸ್ಪೀಕರ್ ನೀಲಂ ಗೋರ್ಹೆ ಅವರು ಉದ್ಧವ್ ಠಾಕ್ರೆ ಅವರ ಬೆಂಬಲವನ್ನು ತೊರೆದು ಶಿಂಧೆ ಗುಂಪಿಗೆ ಸೇರಿದ ಕಾರಣ ಪ್ರತಿಪಕ್ಷವೂ ಅವರ ಸ್ಥಾನಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈ ಕಾರಣಕ್ಕೆ ಇಂದು ವಿಧಾನಪರಿಷತ್ನಲ್ಲಿ ಅಧಿವೇಶನ ಆರಂಭವಾದ ಬಳಿಕ ಶಾಸಕ ಜಯಂತ್ ಪಾಟೀಲ್ ಸದನದಲ್ಲಿ ವಿಷಯ ಪ್ರಸ್ತಾಪಿಸಿ ನೀಲಂ ಗೊರ್ಹೆ ಹುದ್ದೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಉಪಸಭಾಪತಿ ಉತ್ತರ ಹೀಗಿದೆ:ಜಯಂತ್ ಪಾಟೀಲ್ ಅವರ ಆಕ್ಷೇಪಕ್ಕೆ ಪ್ರತಿಪಕ್ಷಗಳು ಬೆಂಬಲ ಸೂಚಿಸಿದ್ದರಿಂದ ಸದನದಲ್ಲಿ ಗದ್ದಲ ಆರಂಭವಾಯಿತು. ಪ್ರತಿಪಕ್ಷಗಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪಸಭಾಪತಿ ನೀಲಂ ಗೊರ್ಹೆ, ಪ್ರತಿಪಕ್ಷಗಳ ಆಕ್ಷೇಪಣೆ ಇದ್ದಲ್ಲಿ ಗುಂಪಿನ ಸಭೆಯಲ್ಲಿ ಚರ್ಚಿಸಬೇಕಿತ್ತು. ಆದರೆ, ಸಂವಿಧಾನ ಸಭೆಯ ವೇಳೆ ಪ್ರತಿಪಕ್ಷಗಳು ಗೈರುಹಾಜರಾಗಿದ್ದರಿಂದ ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದರು. ಉಪಸಭಾಪತಿ ಅವರ ನಿರ್ಧಾರದಿಂದ ವಿಪಕ್ಷಗಳು ತೃಪ್ತರಾಗದ ಕಾರಣ ಆಕ್ರೋಶದ ನಿಲುವು ತಳೆದು ಸದನದಿಂದ ನಿರ್ಗಮಿಸಿದವು.
ಪ್ರತಿಪಕ್ಷಗಳ ಆಕ್ಷೇಪವೇನು?:ಈ ಕುರಿತು ಮಾತನಾಡಿದ ಪ್ರತಿಪಕ್ಷ ನಾಯಕ ಅಂಬಾದಾಸ್ ದಾನ್ವೆ, ನೀಲಂ ಗೊರ್ಹೆ ಅವರನ್ನು ಅನರ್ಹಗೊಳಿಸಿದ ಕುರಿತು ಕಾರ್ಯದರ್ಶಿಗೆ ಪತ್ರ ನೀಡಲಾಗಿದೆ. ಆದರೆ, ನಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದರು. ಇನ್ನು ಠಾಕ್ರೆ ಬಣದ ಶಿವಸೇನೆ ನಾಯಕ ಶಾಸಕ ಅನಿಲ್ ಪರಬ್ ಮಾತನಾಡಿ, ಕಾನೂನು ಪ್ರಕಾರ ಉಪ ಸ್ಪೀಕರ್ ನೀಲಂ ಗೊರ್ಹೆ ಅವರನ್ನು ಅನರ್ಹಗೊಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಅವರಿಗೆ ಈ ಹುದ್ದೆಯನ್ನು ಅಲಂಕರಿಸಲು ಅವಕಾಶ ನೀಡಬಾರದು. ಈ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಡೆಪ್ಯೂಟಿ ಸ್ಪೀಕರ್ ಆ ಕುರ್ಚಿಯನ್ನು ಅಲಂಕರಿಸಬಾರದು ಎಂದು ನಾವೆಲ್ಲರೂ ಆಗ್ರಹಿಸುತ್ತಿದ್ದೇವೆ. ಆದ್ದರಿಂದ ನಾವು ಸದನವನ್ನು ಬಹಿಷ್ಕರಿಸಿದ್ದೇವೆ ಅಂತಾ ಪರಬ್ ಹೇಳಿದ್ದಾರೆ.