ಮುಂಬೈ:ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹತ್ಯೆ ಮಾಡುವುದಾಗಿ ಮತ್ತೊಂದು ಬೆದರಿಕೆ ಬಂದಿದೆ. ಮುಂಬೈ ಸಂಚಾರ ಪೊಲೀಸ್ ವಿಭಾಗದ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ 26/11 ರ ಮಾದರಿಯ ಮತ್ತೊಂದು ದಾಳಿಗೆ ಸಿದ್ಧರಾಗಿ, ಇಬ್ಬರು ನಾಯಕರನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಪೊಲೀಸರು ಕ್ಷಿಪ್ರ ತನಿಖೆ ಆರಂಭಿಸಿದ್ದಾರೆ.
ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ಳನ್ನು ವಾಪಸ್ ಕಳುಹಿಸದಿದ್ದರೆ 26/11 ರ ಮಾದರಿ ಭಯೋತ್ಪಾದಕ ದಾಳಿ ನಡೆಸಲಾಗುವುದು ಎಂದು ಜುಲೈ 12 ರಂದು ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಈಗ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಹತ್ಯೆ ಸಂಚು ಮಾಡಿರುವ ಬಗ್ಗೆ ಬೆದರಿಕೆ ಹಾಕಲಾಗಿದೆ. ಪ್ರಕರಣವನ್ನು ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ತನಿಖೆ ಆರಂಭಿಸಿದ್ದಾರೆ.
26/11 ಮಾದರಿ ದಾಳಿ ಬೆದರಿಕೆ:ವಾರದ ಹಿಂದಷ್ಟೇ ಮುಂಬೈ ಪೊಲೀಸರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದು, ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ಳನ್ನು ಮರಳಿ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸದಿದ್ದರೆ 26/11 ಮಾದರಿ ಭಯೋತ್ಪಾದಕ ದಾಳಿ ನಡೆಸಲಾಗುವುದು. ಮುಂಬೈನ ವಿವಿಧೆಡೆ ಬಾಂಬ್ ಮತ್ತು ಎಕೆ 47 ರವಾನಿಸಲಾಗುವುದು ಎಂದು ಅಪರಿಚಿತ ವ್ಯಕ್ತಿ ಹೇಳಿದ್ದ. ಈ ಬಗ್ಗೆ ಮುಂಬೈ ಪೊಲೀಸರು ಅಲರ್ಟ್ ಆಗಿದ್ದರು.