ಮುಂಬೈ, ಮಹಾರಾಷ್ಟ್ರ: ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ನಕಲಿ ಸುದ್ದಿಗಳನ್ನು ಗುರುತಿಸಲು ಇತ್ತೀಚೆಗೆ ತಿದ್ದುಪಡಿ ಮಾಡಲಾದ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ಅಡಿ ಸೆಪ್ಟೆಂಬರ್ 4 ರವರೆಗೆ ‘ಫ್ಯಾಕ್ಟ್ ಚೆಕ್ ಯುನಿಟ್’ (ಎಫ್‌ಸಿಯು)ಗೆ ಅಧಿಸೂಚನೆ ನೀಡುವುದಿಲ್ಲ ಎಂದು ಕೇಂದ್ರವು ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ನಿಯಮಗಳನ್ನು ಸಮರ್ಥಿಸುವ ಕೇಂದ್ರವು ತನ್ನ ವಾದಗಳನ್ನು ಮಂಡಿಸಲು ನ್ಯಾಯಾಲಯವು ನಿಗದಿಪಡಿಸಿದ ಹಿಂದಿನ ದಿನಾಂಕಗಳನ್ನು ಮುಂದೂಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವನ್ನು ಕೋರಿದರು.
ತಿದ್ದುಪಡಿ ಮಾಡಿರುವ ಐಟಿ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಸ್ಟ್ಯಾಂಡ್ - ಅಪ್ ಕಾಮಿಡಿಯನ್ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜೀನ್‌ಗಳು ನಿಯಮಗಳ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳನ್ನು ಅನಿಯಂತ್ರಿತ ಮತ್ತು ಅಸಂವಿಧಾನಿಕ ಎಂದು ಕರೆದಿದ್ದರು. ಅವು ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಕಟ್ಟ ಪರಿಣಾಮ ಬೀರುತ್ತವೆ ಎಂದು ಪ್ರತಿಪಾದಿಸಿದ್ದಾರೆ.
ಅರ್ಜಿದಾರರ ಪರ ವಕೀಲರು ತಮ್ಮ ವಾದವನ್ನು ಪೂರ್ಣಗೊಳಿಸಿದ ನಂತರ ನ್ಯಾಯಾಲಯವು ಮೆಹ್ತಾ ವಾದಿಸಲು ಜುಲೈ 27 ಮತ್ತು 28ಕ್ಕೆ ಮುಂದೂಡಿತು. ಶುಕ್ರವಾರ ಮೆಹ್ತಾ ಅವರು ಆಗಸ್ಟ್ ಅಂತ್ಯಕ್ಕೆ ಈ ಪ್ರಕರಣವನ್ನು ಮುಂದೂಡಲು ನ್ಯಾಯಾಲಯವನ್ನು ಕೋರಿದರು. "ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಆಗಸ್ಟ್ 2 ರಿಂದ ಆರ್ಟಿಕಲ್ 370 (ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿತು) ಗೆ ಸಂಬಂಧಿಸಿದ ವಿಷಯಗಳಲ್ಲಿ ವಾದಗಳನ್ನು ಆಲಿಸಲು ಪ್ರಾರಂಭಿಸುತ್ತದೆ. ಅದಕ್ಕಾಗಿ ನಾನು ಕೆಲವು ಸಿದ್ಧತೆಗಳನ್ನು ಮಾಡಬೇಕಾಗಿದೆ. ಹೀಗಾಗಿ ಆಗಸ್ಟ್ ಅಂತ್ಯದವರೆಗೆ ಸಮಯ ನೀಡುವಂತೆ" ಮೆಹ್ತಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು.
ಇದಕ್ಕೆ ಒಪ್ಪಿಗೆ ಸೂಚಿಸಿದ ಪೀಠವು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ವಿಚಾರಣೆಗೆ ಮುಂದೂಡಿತು. ಐಟಿ ಕಾಯ್ದೆಯಡಿ ಸ್ಥಾಪಿಸಲಿರುವ ಫ್ಯಾಕ್ಟ್ ಚೆಕ್ ಘಟಕದ ಅಧಿಸೂಚನೆಯನ್ನು ಸೆಪ್ಟೆಂಬರ್ 4 ರವರೆಗೆ ವಿಸ್ತರಿಸಲಾಗುವುದು ಎಂದು ಮೆಹ್ತಾ ಅವರು ಹೇಳಿದರು. ಈ ವರ್ಷದ ಏಪ್ರಿಲ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ ನಂತರ ಜುಲೈವರೆಗೆ ಎಫ್‌ಸಿಯುಗೆ ಸೂಚಿಸುವುದಿಲ್ಲ ಎಂದು ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ತಿಂಗಳು ನ್ಯಾಯಾಲಯವು ಅರ್ಜಿಗಳಲ್ಲಿ ವಾದಗಳನ್ನು ಆಲಿಸಲು ಪ್ರಾರಂಭಿಸಿದಾಗ ಕಾಲಕಾಲಕ್ಕೆ ಹೇಳಿಕೆಯನ್ನು ವಿಸ್ತರಿಸಲಾಯಿತು.