ಮುಂಬೈ: ಮೀರಾ ರೋಡ್‌ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಜೂನ್ 3 ರ ಮಧ್ಯರಾತ್ರಿ ಮೀರಾ ರಸ್ತೆಯ ಗೀತಾ ನಗರದ ಆಕಾಶದೀಪ್ ಕಟ್ಟಡದ ಕೊಠಡಿ ಸಂಖ್ಯೆ 704 ರಲ್ಲಿ ಸರಸ್ವತಿ ವೈದ್ಯ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೂಲಗಳಿಂದ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ.
ಮೀರಾ ರಸ್ತೆಯಲ್ಲಿ ನಡೆದ ಕೊಲೆ ಮಹಾರಾಷ್ಟ್ರ ಮಾತ್ರವಲ್ಲದೇ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ, ಕೇಸ್ಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಬಹಿರಂಗವಾಗಿದ್ದು, ಆರೋಪಿ ಮನೋಜ್ ಸಾನೆ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ಬಯಲಾಗಿದೆ. ಬುಧವಾರ ಮಧ್ಯರಾತ್ರಿ ಮನೋಜ್ ಸಾನೆಯನ್ನು ಬಂಧಿಸಿದ ನಂತರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ತಾನು ಮತ್ತು ಸರಸ್ವತಿ ಅನಾಥರು ಎಂದು ಹೇಳಿದ್ದ. ಆದರೆ, ಗುರುವಾರ ಸರಸ್ವತಿಯ ಮೂವರು ಸಹೋದರಿಯರು ಪೊಲೀಸರನ್ನು ಭೇಟಿಯಾಗಿದ್ದು, ಮನೋಜ್ ಸಾನೆ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಅಷ್ಟೇ ಅಲ್ಲದೆ, ಆಕೆಯ ನೆನಪಿಗಾಗಿ ದೇಹದ ಫೋಟೋವನ್ನು ತೆಗೆದುಕೊಂಡಿರುವುದು ತಿಳಿದು ಬಂದಿದೆ.
ಪೊಲೀಸರ ದಿಕ್ಕು ತಪ್ಪಿಸಲು ಯತ್ನ: ಇನ್ನು ಸರಸ್ವತಿಯ ಸಹೋದರಿಯರಿಗೆ ಪೊಲೀಸರು ವಿವರವಾದ ಮಾಹಿತಿ ನೀಡಿದಾಗ ಅವರು ನಿಜವಾಗಿಯೂ ಸರಸ್ವತಿಯ ಸಹೋದರಿಯರೇ ಎಂದು ಪರಿಶೀಲಿಸಿದರು. ಮೃತ ಸರಸ್ವತಿಗೆ ಐವರು ಸಹೋದರಿಯರಿದ್ದು, ಈ ಐವರಲ್ಲಿ ಸರಸ್ವತಿ ಕಿರಿಯವಳು. ಆದರೆ ಪೊಲೀಸ್ ವಿಚಾರಣೆ ವೇಳೆ ಸರಸ್ವತಿ ಅನಾಥೆ ಎಂದು ಮನೋಜ್ ಸಾನೆ ಹೇಳಿಕೊಂಡಿರುವುದು ಪೊಲೀಸರ ದಿಕ್ಕು ತಪ್ಪಿಸುವುದಕ್ಕೆ ಎಂದು ತಿಳಿದು ಬಂದಿದೆ.
ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಮನೋಜ್ ಕೂಡ ನನಗೆ ಸೋದರ ಸಂಬಂಧಿಗಳಿದ್ದು, ಅವರು ಮುಂಬೈನಲ್ಲಿದ್ದಾರೆ. ಈ ವಿಚಾರವನ್ನು ಅವರಿಗೆ ತಿಳಿಸಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ. ಇದರಿಂದ ಮನೋಜ್ ಮತ್ತು ಮೃತ ಮಹಿಳೆ ಅನಾಥರಲ್ಲ, ಸಂಬಂಧಿಕರಿದ್ದಾರೆಂದು ಸ್ಪಷ್ಟವಾಗಿದೆ. ಇನ್ನು ಸರಸ್ವತಿ ಸಹೋದರಿಯರು ಗುರುವಾರ ಪೊಲೀಸರನ್ನು ಭೇಟಿ ಮಾಡಿದ ನಂತರ ಮೃತ ದೇಹ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಿ, ಡಿಎನ್‌ಎ ಹೋಲಿಕೆ ಮಾಡಿ ಶವವನ್ನು ಹಸ್ತಾಂತರಿಸಲಿದ್ದಾರೆ.