ನಾಗ್ಪುರ (ಮಹಾರಾಷ್ಟ್ರ): ನಗರದ ಹಿಂಗಾನಾ ಎಂಐಡಿಸಿ ಕಂಪನಿಯಲ್ಲಿ ಅಗ್ನಿ ಅವಘಡ ನಡೆದಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೂವರು ಕಾರ್ಮಿಕರು ಸಜೀಹದಹನವಾಗಿದ್ದಾರೆ ಎಂದು ವರದಿಯಾಗಿದೆ. ಇನ್ನೂ 10 ರಿಂದ 12 ಕಾರ್ಮಿಕರು ಒಳಗೆ ಸಿಲುಕಿರುವ ಆತಂಕ ಉಂಟಾಗಿದೆ.
ಹಿಂಗಾನಾ MIDC ಯಲ್ಲಿನ ಸೋನೆಗಾಂವ್ ನಿಪಾನಿಯಲ್ಲಿ ಕಟಾರಿಯಾ ಆಗ್ರೋ ಪ್ರೈವೇಟ್ ಲಿಮಿಟೆಡ್‌ನ ಈ ಕಂಪನಿಯಲ್ಲಿ ಬೆಂಕಿಯಿಂದ ಮೂವರು ಕಾರ್ಮಿಕರ ದುರಾದೃಷ್ಟಕರ ಸಾವಿನ ಬಗ್ಗೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಸಮನ್ವಯ ಸಾಧಿಸುವಂತೆ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ಜಿಲ್ಲಾಧಿಕಾರಿಗಳಿಗೆ ತಕ್ಷಣವೇ ಸೂಚಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರಿಗೆ ತಕ್ಷಣ ಉತ್ತಮ ಚಿಕಿತ್ಸೆ ನೀಡಬೇಕು ಎಂದು ದೇವೇಂದ್ರ ಫಡ್ನವೀಸ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಮುಂಬೈನ ಸಭೆಯಲ್ಲಿದ್ದರೂ ನಿರಂತರವಾಗಿ ಸಮನ್ವಯ ಸಾಧಿಸುತ್ತಿದ್ದಾರೆ. ತಹಶೀಲ್ದಾರ್ ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ.
ಕಂಪೆನಿಯೊಂದರಲ್ಲಿ ಬೆಂಕಿ ಅವಘಡ: ಇಲ್ಲಿನ ಕಲ್ಪತರು ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಕಂಪನಿಯೊಂದರಲ್ಲಿ (ಏಪ್ರಿಲ್ 15 -2023)ರಂದು ಬೆಂಕಿ ಅವಘಡ ಸಂಭವಿಸಿತ್ತು. ಕಂಪನಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ನಾಲ್ಕು ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿತ್ತು.
ಈ ವೇಳೆ ಕಂಪನಿಯಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿದ್ದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದರು. ಬೆಂಕಿ ಅವಘಡಕ್ಕೆ ಸೂಕ್ತ ಕಾರಣ ತಿಳಿದು ಬಂದಿರಲಿಲ್ಲ.