ಮುಂಬೈ (ಮಹಾರಾಷ್ಟ್ರ):ಪ್ರೇಮ ವಿವಾಹವಾಗಿದ್ದಕ್ಕೆ ಕೋಪಗೊಂಡ ತಂದೆಯೊಬ್ಬ ಮಗನ ನೆರವಿನಿಂದ ತನ್ನ ಪುತ್ರಿ ಹಾಗೂ ಅಳಿಯನನ್ನು ಕೊಂದು ಹಾಕಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ. ಈ ಮರ್ಯಾದಾಗೇಡು ಹತ್ಯೆಯ ಘಟನೆ ಮುಂಬೈನ ಗೋವಂಡಿ ಪ್ರದೇಶದಲ್ಲಿ ನಡೆದಿತ್ತು. ಪ್ರೇಮ ವಿವಾಹದ ಹಿನ್ನೆಲೆ ನಡೆದ ಜೋಡಿ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆಯಾದ ಕರಣ್ ರಮೇಶ್ಚಂದ್ರ ಎಂಬ ಹುಡುಗ ಉತ್ತರ ಪ್ರದೇಶದವನು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ತನಿಖೆಯಿಂದ ಮಾಹಿತಿ ಬಹಿರಂಗ:ಗೋವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ 14ರಂದು ಸುಮಾರು 20 ರಿಂದ 22 ವರ್ಷ ವಯಸ್ಸಿನ ಅಪರಿಚಿತ ಶವ ಪತ್ತೆಯಾಗಿತ್ತು. ಈ ಸಂಬಂಧ ಗೋವಂಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302, 201ರ ಅಡಿ ಪ್ರಕರಣ ದಾಖಲಾಗಿತ್ತು. ಉಪ ಪೊಲೀಸ್ ಆಯುಕ್ತ ಹೇಮರಾಜ್ ರಜಪೂತ್ ಅವರ ಮಾರ್ಗದರ್ಶನದಲ್ಲಿ ಗೋವಂಡಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಹೊನ್ವಾಡ್ಕರ್ ತಂಡವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ತನಿಖೆ ವೇಳೆ, ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮ ವಿವಾಹದ ಹಿನ್ನೆಲೆ ಉತ್ತರ ಪ್ರದೇಶದ ಯುವಕ ಕರಣ್ ರಮೇಶ್ಚಂದ್ರ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಿಂದ ತಿಳಿದಿದೆ.