ಪಾಲ್ಘರ್(ಮಹಾರಾಷ್ಟ್ರ): ಜಿಲ್ಲೆಯ ದಹಾನು ಪ್ರದೇಶದಲ್ಲಿ ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಐಷಾರಾಮಿ ಬಸ್‌ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃಪಟ್ಟಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ನಾಲ್ವರೂ ಮುಂಬೈನಿಂದ ಸೂರತ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪಾಲ್ಘರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಮೊಹಮ್ಮದ್ ಹಫೀಜ್ (36), ಇಬ್ರಾಹಿಂ ದಾವೂದ್ (60), ಆಶಿಯಾ ಕಲೆಕ್ಟರ್ (57) ಮತ್ತು ಇಸ್ಮಾಯಿಲ್ ದೇಸಾಯಿ (42) ಎಂದು ಮೃತರನ್ನು ಗುರುತಿಸಲಾಗಿದೆ. ಮೃತರು ಸೂರತ್‌ನ ಬಾರ್ಡೋಲಿ ನಿವಾಸಿಗಳು ಎಂದು ಪಾಲ್ಘರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್ ತಿಳಿಸಿದ್ದಾರೆ.
''ದಹಣುವಿನ ಕಳಸ ಸೇತುವೆ ಬಳಿ ಮುಂಜಾನೆ 3.10ಕ್ಕೆ ಅಪಘಾತ ಸಂಭವಿಸಿದೆ. ಈ ನಾಲ್ವರು ಇದ್ದ ಕಾರು ಗುಜರಾತಿಗೆ ಹೊರಟಿತ್ತು. ಕಾರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ಬಂದು ಐಷಾರಾಮಿ ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ'' ಎಂದು ಪಾಟೀಲ್ ಹೇಳಿದರು. ಅಪಘಾತದ ಪರಿಣಾಮವು ಎಷ್ಟು ತೀವ್ರವಾಗಿದೆಯೆಂದರೆ, ಎಲ್ಲಾ ನಾಲ್ಕು ದೇಹಗಳು ಕಾರಿನಲ್ಲಿ ಸಿಲುಕಿಕೊಂಡಿದ್ದು, ನುಜ್ಜುಗುಜ್ಜಾಗಿವೆ ಹಾಗೂ ಐಷಾರಾಮಿ ಬಸ್ಸಿನ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳು ಕಳಸದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.