ಮುಂಬೈ( ಮಹಾರಾಷ್ಟ್ರ): ಐಆರ್‌ಎಸ್‌ನ ಹಿರಿಯ ಅಧಿಕಾರಿಯೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಮತ್ತೆ ದಾಳಿ ನಡೆಸಿದೆ. ಈ ಅಧಿಕಾರಿ ಈ ಮೊದಲು ಇಡಿಯ ಮುಂಬೈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಸ್ತುತ ಇವರು ಕಸ್ಟಮ್ಸ್ ಮತ್ತು ಜಿಎಸ್‌ಟಿ ಕೇಡರ್‌ನ ಹೆಚ್ಚುವರಿ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ.
ಅಂದ ಹಾಗೆ ಇಡಿ ದಾಳಿ ನಡೆದಿರುವುದು ಐಆರ್‌ಎಸ್ ಹಿರಿಯ ಅಧಿಕಾರಿ ಸಚಿನ್ ಸಾವಂತ್ ಅವರ ಮೇಲೆ. ಅಕ್ರಮ ಆಸ್ತಿ ಪ್ರಕರಣ ಸಂಬಂದ, ಸಿಬಿಐ ಅಧಿಕಾರಿಗಳು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಕೇಸ್ ಆಧಾರದ ಮೇಲೆ ಸಚಿನ್ ಸಾವಂತ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಐಆರ್‌ಎಸ್ ಅಧಿಕಾರಿ ಸಚಿನ್ ಸಾವಂತ್ ಅವರ ಮುಂಬೈ ನಿವಾಸದ ಮೇಲೆ ಇಡಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರ ಮತ್ತು ಲೆಕ್ಕಕ್ಕೆ ಸಿಗದ ಆಸ್ತಿ ಪ್ರಕರಣಕ್ಕೆ ಸಂಬಂಧವಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರವೇ ಸಾವಂತ್ ಅವರ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿದ್ದು, ಸಂಬಂಧಿಸಿದ ದಾಖಲೆ ಪತ್ರಗಳ ಶೋಧ ನಡೆಸಿದ್ದಾರೆ. ಈ ಹಿಂದೆ ಇಡಿ ಮುಂಬೈ ವಲಯ 2ರಲ್ಲಿ ಉಪನಿರ್ದೇಶಕರಾಗಿ ಸಚಿನ್ ಸಾವಂತ್ ಅವರು ಕೆಲಸ ಮಾಡಿದ್ದರು. ಈ ವೇಳೆ,ಕೆಲವು ವಜ್ರ ಕಂಪನಿಗಳು ಅಕ್ರಮವಾಗಿ 500 ಕೋಟಿ ರೂ.ಗೂ ಹೆಚ್ಚು ಹಣವನ್ನು ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರು ತನಿಖೆ ನಡೆಸಿದ್ದರು.
ಈ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿ, ಆಗ ಅಧಿಕಾರಿಯಾಗಿದ್ದ ಸಚಿನ್ ಸಾವಂತ್ ವಿರುದ್ಧ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಕೇಂದ್ರೀಯ ತನಿಖಾ ದಳ ಸಿಬಿಐ ಸಾವಂತ್ ವಿರುದ್ಧ ಪ್ರಕರಣ ದಾಖಸಿಕೊಂಡು ತನಿಖೆ ನಡೆಸಿತ್ತು. ಇದೇ ಆಧಾರದ ಮೇಲೆ ಈಗ ಇಡಿ ಅಧಿಕಾರಿಗಳು ಸಾವಂತ್ ಅವರ ನಿವಾಸ, ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದೆ ಎಂದು ತಿಳಿದು ಬಂದಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಮಧ್ಯರಾತ್ರಿಯವರೆಗೂ ಇಡಿ ಅಧಿಕಾರಿಗಳ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು ಎಂಬ ಮಾಹಿತಿಯೂ ಇಡಿ ಮೂಲಗಳಿಂದ ತಿಳಿದು ಬಂದಿದೆ.
ಇದನ್ನು ಓದಿ:Lokayuktha raid: ಶಿವಮೊಗ್ಗ, ಚಾಮರಾಜನಗರದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟ ಪುರಸಭೆ ಸಿಬ್ಬಂದಿ, ಕಂದಾಯ ನಿರೀಕ್ಷಕ ಬಲೆಗೆ