ನಾಸಿಕ್ (ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ಡೆಂಘೀ ಮತ್ತು ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಒಂದೇ ದಿನದಲ್ಲಿ ಸುಮಾರು 7,000 ಮನೆಗಳಿಗೆ ಭೇಟಿ ನೀಡಿ ಸುಮಾರು 32,000 ನಾಗರಿಕರಿಗೆ ತಪಾಸಣೆ ನಡೆಸಲಾಗಿದೆ ಎಂದು ನಗರಸಭೆ ಹೇಳಿದೆ. ಆದರೆ, ಈ ತಪಾಸಣೆ ವರದಿಯನ್ನು ಕುಳಿತಲ್ಲೇ ಕಾದಗದಲ್ಲೇ ತಯಾರಿಸಲಾಗಿದೆ. ಆದ್ದರಿಂದ ಈ ವರದಿಯ ಬಗ್ಗೆ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ನಾಸಿಕ್ನಲ್ಲಿ ಡೆಂಘೀ ಮತ್ತು ಮಲೇರಿಯಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕಾಗಿ ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್ನ ಮಲೇರಿಯಾ ವಿಭಾಗವು ತಪಾಸಣೆ ಅಭಿಯಾನ ಪ್ರಾರಂಭಿಸಿದೆ. ಆದರೆ, ಒಂದೇ ದಿನದಲ್ಲಿ 6 ಸಾವಿರದ 768 ಮನೆಗಳಿಗೆ ಭೇಟಿ ನೀಡಿ 32 ಸಾವಿರದ 155 ಮಂದಿಯನ್ನು ಡೆಂಗ್ಯೂ ಮತ್ತು ಮಲೇರಿಯಾ ತಪಾಸಣೆಗೆ ಒಳಪಡಿಸಲಾಗಿದೆ ಎಂದು ವರದಿ ಸಲ್ಲಿಸಿದೆ.
ಜುಲೈ 20ರಂದು ಪುರಸಭೆಯ ಜೀವಶಾಸ್ತ್ರಜ್ಞ ಡಾ.ರಾಜೇಂದ್ರ ಟ್ರಂಬಾಕೆ ಈ ದೈನಂದಿನ ವರದಿಯನ್ನು ಸಲ್ಲಿಸಿದ್ದಾರೆ. ಆದರೆ, ಈಗ ವರದಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಲೇರಿಯಾ ವಿಭಾಗ ಈ ಅಭಿಯಾನ ನಡೆಸಲು ಸಿಬ್ಬಂದಿಯೇ ಇಲ್ಲ. ಡೆಂಘೀ ಮತ್ತು ಮಲೇರಿಯಾ ನಿಯಂತ್ರಣಕ್ಕಾಗಿ ಮನೆ - ಮನೆಗೆ ತೆರಳಿ ಸಿಬ್ಬಂದಿ ಹೇಗೆ ತಪಾಸಣೆ ನಡೆಸಿದರು?. ನಿಜವಾಗಿಯೂ 6 ಸಾವಿರದ 768 ಮನೆಗಳಲ್ಲಿ ತಪಾಸಣೆ ಮಾಡಲಾಗಿದೆಯೇ?, ಭೇಟಿಯಾದ 32 ಸಾವಿರದ 151 ನಾಗರಿಕರು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ಜಿತೇಂದ್ರ ಭಾವೆ ಹೇಳಿದ್ದಾರೆ.