ಪುಣೆ(ಮಹಾರಾಷ್ಟ್ರ):ಕಾಂಗ್ರೆಸ್ ನಾಯಕ ಮಾಜಿ ಸಂಸದ ರಾಹುಲ್ ಗಾಂಧಿ ಕಳೆದ ಕೆಲವು ದಿನಗಳಿಂದ ಸಾವರ್ಕರ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದು, ಇದು ದೊಡ್ಡ ವಿವಾದವನ್ನೂ ಸೃಷ್ಟಿಸಿದೆ. ಆದರೆ ಸಾವರ್ಕರ್ ಅವರ ಮರಿ ಮೊಮ್ಮಗ ಸಾತ್ಯಕಿ ಸಾವರ್ಕರ್ ರಾಹುಲ್ ಅವರು ರಾಹುಲ್ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲು ಮಾಡಿದ್ದಾರೆ.
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ತಮ್ಮ ಭಾಷಣದ ವೇಳೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸಾತ್ಯಕಿ ಸಾವರ್ಕರ್ ಆರೋಪಿಸಿದ್ದಾರೆ. ವಕೀಲರ ಮೂಲಕ ಮಾನನಷ್ಟ ಮೊಕದ್ದಮೆಯನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500ರ ಪರಿಚ್ಛೇದದ ಡಿ ನಗರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇವೆ. ಕೆಲವು ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿರದ ಕಾರಣ ಶನಿವಾರ ಮತ್ತೆ ಬರುವಂತೆ ಹೇಳಿದ್ದಾರೆ ಎಂದು ಸಾತ್ಯಕಿ ಇದೇ ವೇಳೆ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರು ಲಂಡನ್‌ನಲ್ಲಿ ಮಾತನಾಡುತ್ತಿದ್ದ ವೇಳೆ, ವೀರ ಸಾವರ್ಕರ್ ಪುಸ್ತಕವನ್ನು ಉಲ್ಲೇಖಿಸಿದ್ದರು. ಅದರಲ್ಲಿ ಹೀಗಿತ್ತು. ‘‘ಕೆಲವು ಹಿಂದೂಗಳು ಸೇರಿ ಒಬ್ಬ ಮುಸಲ್ಮಾನನನ್ನು ಥಳಿಸಿದ್ದರು. ಇದು ನನಗೆ ಸಂತಸವನ್ನು ನೀಡಿತ್ತು’‘ಎಂದು ಉಲ್ಲೇಖಿಸಲಾಗಿದೆ ಎಂದು ರಾಹುಲ್ ಹೇಳಿದ್ದರು. ಅಷ್ಟೇ ಅಲ್ಲ ಇಂತಹ ಕಥೆ ಹೇಳುವ ಈ ಹೇಳಿಕೆ ಖಂಡನೀಯವಲ್ಲವೇ? ಎಂದು ಸಭಿಕರನ್ನ ರಾಹುಲ್ ಪ್ರಶ್ನಿಸಿದ್ದರು. ಆದರೆ ಇದು ಸುಳ್ಳು ಎಂದು ಸಾತ್ಯಕಿ ಹೇಳಿದ್ದಾರೆ.
ಕಾಂಗ್ರೆಸ್ ಯಾವಾಗಲೂ ತುಷ್ಟೀಕರಣದ ರಾಜಕೀಯ ಮಾಡುತ್ತಿದೆ ಮತ್ತು ರಾಜಕೀಯ ಮೈಲೇಜ್ ಪಡೆಯಲು ಸಾವರ್ಕರ್ ಅವರ ಹೆಸರನ್ನು ಬಳಸಿಕೊಂಡಿದೆ ಎಂದು ಸಾತ್ಯಕಿ ಇದೇ ವೇಳೆ ಆರೋಪಿಸಿದ್ದಾರೆ. ವೀರ್ ಸಾವರ್ಕರ್ ವೈಜ್ಞಾನಿಕತೆ ಮನೋಧರ್ಮದ ವ್ಯಕ್ತಿಯಾಗಿದ್ದರು. ಅವರ ಜೀವನದಲ್ಲಿ ಅಂತಹ ಘಟನೆ ನಡೆದಿಲ್ಲ. ಸಾವರ್ಕರ್ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದರು ಎಂದು ಸಾತ್ಯಕಿ, ತಮ್ಮ ತಾತನ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.