ಅಮರಾವತಿ, ಮಹಾರಾಷ್ಟ್ರ: ಅಮರಾವತಿ ಜಿಲ್ಲೆಯಿಂದ ಭೀಕರ ರಸ್ತೆ ಅಪಘಾತದ ಸುದ್ದಿಯೊಂದು ಹೊರಬಿದ್ದಿದೆ. ಸೋಮವಾರ (ಇಂದು) ಮುಂಜಾನೆ 5.30ಕ್ಕೆ ರಸ್ತೆ ಕಾಮಗಾರಿಗೆ ಎಂದು ಮೆಲ್ಘಾಟ್‌ಗೆ ತೆರಳಿದ್ದ ಬುಡಕಟ್ಟು ಕಾರ್ಮಿಕರ ಮೇಲೆ ಟ್ರಕ್ ಹರಿದಿದ್ದು, ಹಲವಾರು ಸಾವು ನೋವುಗಳು ಸಂಭವಿಸಿವೆ.
ಬಂದಿರುವ ಮಾಹಿತಿ ಪ್ರಕಾರ ಬುಲ್ಧಾನ ತಾಲೂಕಿನ ಮಲ್ಕಾಪುರದಿಂದ ನಂದೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ ನಂ.6ರಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಿಮಿತ್ತ ನಂದೂರಕ್ಕೆ ತೆರಳಿ ರಸ್ತೆ ಬದಿ ನಿರ್ಮಿಸಿದ್ದ ಗುಡಿಸಲಿನಲ್ಲಿ ಮೊರಗಡ ತಾಲೂಕು ಚಿಕಲದಾರದ 10 ಕೂಲಿ ಕಾರ್ಮಿಕರು ಮಲಗಿದ್ದರು. ಇಂದು ಬೆಳಗ್ಗೆ ವೇಗವಾಗಿ ಬಂದ ಲಾರಿ ಗುಡಿಸಲಿಗೆ ಡಿಕ್ಕಿ ಹೊಡೆದಿದೆ.
ಈ ಹೃದಯ ವಿದ್ರಾವಕ ಅಪಘಾತದಲ್ಲಿ ಗುಡಿಸಲಿನಲ್ಲಿ ಮಲಗಿದ್ದ ಪ್ರಕಾಶ್ ಬಾಬು ಜಂಭೇಕರ್ (26 ವರ್ಷ), ಪಂಕಜ್ ತುಳಶಿರಾಮ್ ಜಂಭೇಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ವೇಳೆ ಅಭಿಷೇಕ್ ರಮೇಶ್ ಜಂಭೇಕರ್ (18) ಮೃತಪಟ್ಟಿದ್ದು, ಇತರ ಕಾರ್ಮಿಕರು ಗಾಯಗೊಂಡಿದ್ದಾರೆ.
ದೀಪಕ್ ಶೋಗಿ ಬೆಲ್ಸಾರೆ (25 ವರ್ಷ) ಮತ್ತು ರಾಜ ದಾದು ಜಂಭೇಕರ್ (35 ವರ್ಷ) ಮಲ್ಕಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಮೆಲ್ಘಾಟ್ ಶಾಸಕ ರಾಜಕುಮಾರ್ ಪಟೇಲ್ ಸಾಹೇಬ್ ಬುಲ್ಧಾನಾಗೆ ತೆರಳಿದರು. ಬಳಿಕ ಹಿರಿಯ ಅಧಿಕಾರಿಗಳಿಂದ ಅಪಘಾತದ ಬಗ್ಗೆ ಮಾಹಿತಿ ಪಡೆದರು.