ಮಹಾರಾಷ್ಟ್ರ:ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೇ 11ಕ್ಕೆ ಮುಂಬೈಗೆ ಭೇಟಿ ನೀಡಲಿದ್ದಾರೆ. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಠಾಕ್ರೆ ಗ್ರೂಪ್ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ನಡೆಯಲಿರುವ ಮೂರನೇ ಮೈತ್ರಿಕೂಟದ ಸಭೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿದ್ದಾರೆ. ಇದರಿಂದ ಶಿವಸೇನೆ ಮತ್ತು ಎನ್‌ಸಿಪಿ ಮೂರನೇ ಮೈತ್ರಿಕೂಟಕ್ಕೆ ಸೇರುತ್ತಾರಾ, ಪ್ರಧಾನಮಂತ್ರಿ ಹುದ್ದೆ ಯಾರಿಗೆ ಎಂಬ ಪ್ರಶ್ನೆಗಳು ಎದ್ದಿವೆ.
ಮೂರನೇ ಮೈತ್ರಿ ಚರ್ಚೆ ಆರಂಭ:ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತೊಮ್ಮೆ ಪಕ್ಷದ ಸಾರಥ್ಯ ವಹಿಸಿಕೊಂಡ ಬೆನ್ನಲ್ಲೇ ಇದೀಗ ಮೂರನೇ ಮೈತ್ರಿಕೂಟದ ಚರ್ಚೆ ಆರಂಭವಾಗಿದೆ. ಬಿಜೆಪಿ ವಿರೋಧಿ ತೃತೀಯ ಮೈತ್ರಿಕೂಟ ಒಂದಾಗುತ್ತಿರುವ ಹಿನ್ನೆಲೆಯಲ್ಲಿ ಈ ಪಕ್ಷಗಳು ಯಾವ್ಯಾವ ವಿಚಾರಗಳಲ್ಲಿ ಒಂದಾಗಲಿವೆ ಎಂಬ ಚರ್ಚೆಗಳು ಶುರುವಾಗಿವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರನೇ ಮೈತ್ರಿಕೂಟಕ್ಕೆ ಮುಂದಾಗಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರದಿಂದ ಮೂರನೇ ಮೈತ್ರಿಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಭಾಗವಹಿಸವ ನಿಟ್ಟಿನಲ್ಲಿ ಕೆಲವು ನಾಯಕರಿಂದ ಪ್ರಯತ್ನಗಳು ಪ್ರಾರಂಭವಾಗಿವೆ. ಈ ಹಿಂದೆ ಕೆಸಿಆರ್ ಮತ್ತು ಮಮತಾ ಬ್ಯಾನರ್ಜಿ ಈ ನಿಟ್ಟಿನಲ್ಲಿ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದರು.
ಮೇ 11ಕ್ಕೆ ಮುಂಬೈಗೆ ಭೇಟಿ:ತೃತೀಯ ಮೈತ್ರಿಕೂಟದಲ್ಲಿ ಭಾಗವಹಿಸಲು ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಅವರು ನಿತೀಶ್ ಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂದು ಪವಾರ್ ಮಾಹಿತಿ ನೀಡಿದರು. ಈ ನಿಟ್ಟಿನಲ್ಲಿ ಕರ್ನಾಟಕ ಚುನಾವಣೆ ನಂತರ ನಡೆಯಲಿರುವ ಸಭೆಗೆ ಆಹ್ವಾನಿಸಲು ನಿತೀಶ್ ಕುಮಾರ್ ಅವರು ಮೇ 11ರಂದು ಮುಂಬೈಗೆ ಬರಲಿದ್ದಾರೆ. ಈ ಸಂದರ್ಭದಲ್ಲಿ ನಿತೀಶ್ ಕುಮಾರ್ ಅವರು ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದಾರೆ. ಮಹಾರಾಷ್ಟ್ರದ ಈ ಎರಡು ಪಕ್ಷಗಳು ಮೂರನೇ ಮೈತ್ರಿಕೂಟದಲ್ಲಿ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ.