ಪುಣೆ: ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳಾ ಡ್ರೈವರ್ಗಳು ಬಸ್ ಸ್ಟಿಯರಿಂಗ್ ಹಿಡಿದು ಬಸ್ ಚಾಲನೆ ಮಾಡಲಿದ್ದಾರೆ. ಇದಕ್ಕಾಗಿ ಪುಣೆ ವಿಭಾಗದಲ್ಲಿ ಈಗಾಗಲೇ 17 ಮಹಿಳಾ ಚಾಲಕಿಯರು ತರಬೇತಿ ಪಡೆಯುತ್ತಿದ್ದಾರೆ. ಇದರಲ್ಲಿ ಆರು ಚಾಲಕಿಯರು ಮೊದಲ ಹಂತದ ತರಬೇತಿ ಪೂರ್ಣಗೊಳಿಸಿದ್ದು, ಎರಡನೇ ಹಂತದ ತರಬೇತಿಯ ನಂತರ ಮಾರ್ಚ್ ಕೊನೆಯಲ್ಲಿ ಸೇವೆಗೆ ಹಾಜರಾಗಲಿದ್ದಾರೆ.
ಆದರೆ, ಈ ಮಹಿಳಾ ಚಾಲಕಿಯರ ವಿದ್ಯಾರ್ಹತೆ ಕೇಳಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ. ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಹಿಳೆಯೊಬ್ಬರು ಬಸ್ ಚಾಲನೆ ಮಾಡಲು ಆ ನೌಕರಿ ಬಿಟ್ಟು ಡ್ರೈವರ್ ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.
ಕಾಲಕ್ಕೆ ತಕ್ಕಂತೆ ಸಾರಿಗೆ ಸಂಸ್ಥೆ (ಮಹಾರಾಷ್ಟ್ರದಲ್ಲಿ ಸಾರಿಗೆ ಸಂಸ್ಥೆಯನ್ನು ಎಸ್ಟಿ ಎಂದು ಕರೆಯಲಾಗುತ್ತದೆ) ತನ್ನ ಸೇವೆಗಳಲ್ಲಿ ಸುಧಾರಣೆ ತರುತ್ತಿದೆ. ಹೊಸ ಮತ್ತು ಆಧುನಿಕ ಬಸ್ಸುಗಳು ನಿಗಮದ ಫ್ಲೀಟ್ ಅನ್ನು ಪ್ರವೇಶಿಸುತ್ತಿವೆ. ನಿಗಮವು ಆರಾಮದಾಯಕ ಪ್ರಯಾಣ ಸೇವೆಗಳನ್ನು ಒದಗಿಸುವತ್ತ ದಾಪುಗಾಲು ಹಾಕುತ್ತಿದೆ. ಬಸ್ಸಿನಲ್ಲಿ ಮೊದಲು ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಪುರುಷರಾಗಿರುತ್ತಿದ್ದರು. ಆದರೆ, ಈಗ ಮಹಿಳೆಯರು ಸಹ ಬಸ್ ಚಾಲನೆ ಮಾಡುವ ಅವಕಾಶ ದೊರೆಯುತ್ತಿದೆ. ಇತ್ತೀಚೆಗೆ ಮಹಿಳಾ ಕಂಡಕ್ಟರ್‌ಗಳು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿರುವುದು ಸಾಮಾನ್ಯವಾಗುತ್ತಿದೆ.
ಮಹಿಳೆಯರು ಕಂಡಕ್ಟರ್ ಮಾತ್ರವಲ್ಲdE ಚಾಲಕರಾಗಿಯೂ ಅವಕಾಶ ನೀಡುವ ಆಲೋಚನೆಯನ್ನು 2018-19 ರಲ್ಲಿ ಸಾರಿಗೆ ಸಂಸ್ಥೆ ಪ್ರಾರಂಭಿಸಿತ್ತು. ಅದರಂತೆ ಮಾರ್ಚ್ 2019 ರಲ್ಲಿ ಮಹಿಳಾ ಚಾಲಕರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಯಿತು. ಅದರ ನಂತರ ಕೊರೊನಾ ಅವಧಿಯ ಕಾರಣದಿಂದ ಕಳೆದ ಒಂದೂವರೆ ವರ್ಷಗಳ ಹಿಂದದೆ ಪುಣೆಯಲ್ಲಿ ಈ ಮಹಿಳಾ ಚಾಲಕರ ತರಬೇತಿ ಪ್ರಾರಂಭವಾಯಿತು. ಆರಂಭದಲ್ಲಿ 30 ಮಹಿಳಾ ಚಾಲಕರು ಈ ತರಬೇತಿಯಲ್ಲಿ ಭಾಗವಹಿಸಿದ್ದರು. ಆದರೆ ನಂತರ 17 ಮಹಿಳೆಯರು ನಿಯಮಿತವಾಗಿ ತರಬೇತಿಗೆ ಹಾಜರಾಗುತ್ತಿದ್ದಾರೆ. ಇದರಲ್ಲಿ ಮಹಿಳಾ ಚಾಲಕಿ ಶೀತಲ್ ಶಿಂಧೆ ಅವರು ಆಕ್ಸಿಸ್ ಬ್ಯಾಂಕ್‌ನಲ್ಲಿನ ತಮ್ಮ ಕೆಲಸ ಬಿಟ್ಟು ಬಸ್ ಡ್ರೈವರ್ ಆಗಲು ನಿರ್ಧರಿಸಿದ್ದಾರೆ.
ಪುಣೆಯಲ್ಲಿ ತರಬೇತಿ ಪಡೆಯುತ್ತಿರುವ ಶೀತಲ್ ಶಿಂಧೆ 2014ರಲ್ಲಿ ಪುಣೆಯ ಬ್ಯಾಂಡ್ ಗಾರ್ಡನ್‌ನ ಆಕ್ಸಿಸ್ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಆರಂಭಿಸಿದರು. ನಾಲ್ಕು ವರ್ಷಗಳ ಕಾಲ ಅವರು ಆ ಹುದ್ದೆಯಲ್ಲಿದ್ದರು. ಆದರೆ ಬಸ್ ಡ್ರೈವಿಂಗ್ ಮಾಡುವ ಹುಚ್ಚು ಅವರಿಗೆ ಮೊದಲಿನಿಂದಲೇ ಇತ್ತು. ಹೀಗಾಗಿ 2019 ರಲ್ಲಿ ಮಹಿಳಾ ಡ್ರೈವರ್ ಬಗ್ಗೆ ಜಾಹೀರಾತು ಪ್ರಕಟವಾದಾಗ ಅವರು ಮ್ಯಾನೇಜರ್ ಹುದ್ದೆಯನ್ನು ತೊರೆದು ಮಹಿಳಾ ಚಾಲಕರಾಗಲು ನಿರ್ಧರಿಸಿದರು.
ಯಾವತ್ತಿಗೂ ನಾಲ್ಕು ಚಕ್ರದ ವಾಹನ ಓಡಿಸದ ಶೀತಲ್ ಅವರಿಗೆ ಬಸ್ ಓಡಿಸುವುದು ಆರಂಭದಲ್ಲಿ ಕಷ್ಟವಾಗಿತ್ತು. ಮೊದಲಿಗೆ ಕಾರನ್ನು ಸ್ಟಾರ್ಟ್ ಮಾಡಲು ಕೂಡ ಹೆದರುತ್ತಿದ್ದರು. ತಮ್ಮ ತರಬೇತಿಯ ಬಗ್ಗೆ ಮಾತನಾಡಿದ ಶೀತಲ್, ಬಸ್ ಚಾಲಕಿಯಾಗಲು ಒಂದೂವರೆ ವರ್ಷದ ತರಬೇತಿ ಪಡೆಯುತ್ತಿರುವುದು ಬಹಳ ಖುಷಿ ತಂದಿದೆ. ಬಸ್ ಓಡಿಸುವ ಅವಕಾಶ ಸಿಗಲಿದೆ ಎಂಬ ಕಾರಣಕ್ಕೆ ನಾನು ಬ್ಯಾಂಕ್ ಮ್ಯಾನೇಜರ್ ಹುದ್ದೆ ತೊರೆದು ಇಲ್ಲಿಗೆ ಬಂದಿದ್ದೇನೆ ಎಂದರು.
ಇದನ್ನೂ ಓದಿ: ಇನ್ಮುಂದೆ ರಾಜ್ಯದಲ್ಲಿ ಮಹಿಳಾ ಡ್ರೈವರ್ಗಳು: ಸ್ವಚ್ಛತಾ ಅಭಿಯಾನದಲ್ಲಿ ಸ್ತ್ರೀಯರದ್ದೇ ಪಾರುಪತ್ಯ