ಮುಂಬೈ:ಮುಂಬೈನಲ್ಲಿ 26/11 ರೀತಿಯ ಭಯೋತ್ಪಾದಕ ದಾಳಿ ನಡೆಸುವ ಕುರಿತು ಟ್ವಿಟರ್ ಮೂಲಕ ಶುಕ್ರವಾರ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ಮಾಹಿತಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಭಯೋತ್ಪಾದಕ ದಾಳಿ ಬೆದರಿಕೆಯೊಡ್ಡಿರುವ ಈ ಟ್ವೀಟ್ ಖಾತೆಯೂ ಗುಜರಾತ್ನಲ್ಲಿರುವ ವ್ಯಕ್ತಿ ಹೆಸರಿನಲ್ಲಿದೆ. ಆ ವ್ಯಕ್ತಿ ಹೆಸರು ಹಾಗೂ ವಿಳಾಸವನ್ನು ಪೊಲೀಸರು ಕಲೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಹುಸಿ ಬೆದರಿಕೆಯಾಗಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಗುರುವಾರ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಇ - ಮೇಲ್ವೊಂದು ಬಂದಿದ್ದು, ತಾಲಿಬಾನ್ನೊಂದಿಗೆ ಸಂಬಂಧ ಹೊಂದಿರುವವರು ಮುಂಬೈ ಮೇಲೆ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಬೆದರಿಕೆ ಬಂದಿತ್ತು. ಇದೀಗ ಮುಂಬೈ ಮೇಲೆ 26-11ರಂತೆ ದಾಳಿ ನಡೆಯಲಿದೆ ಎಂದು ಟ್ವಿಟರ್ ಖಾತೆಯಲ್ಲಿ ಟ್ವೀಟ್ ಬಂದಿದೆ. ಈ ಬಗ್ಗೆ ಅಪರಾಧ ವಿಭಾಗದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಂಬೈ ಜನತೆ ಗಾಬರಿಯಾಗಬಾರದು:ರಾಷ್ಟ್ರೀಯ ತನಿಖಾ ಸಂಸ್ಥೆಗೆ ಅನಾಮಧೇಯ ಇ-ಮೇಲ್ ಬಂದಿತ್ತು. ಮುಂಬೈ ಮೇಲೆ ಬಾಂಬ್ ದಾಳಿಯ ಬೆದರಿಕೆ ಇತ್ತು. ಒಬ್ಬರು ತಾಲಿಬಾನ್ ಎಂದು ಹೇಳಿಕೊಂಡು ಮುಂಬೈ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಈಗಾಗಲೇ ಎನ್ಐಎ ಮುಂಬೈ ಪೊಲೀಸರಿಗೆ ಈ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಿದೆ. ಈ ಬೆದರಿಕೆಯ ನಂತರ, ಪೊಲೀಸರು ಅಲರ್ಟ್ ಆಗಿದ್ದಾರೆ. ಮುಂಬೈಗೆ ಯಾವುದೇ ರೀತಿಯ ಅಪಾಯವಿಲ್ಲ. ಮುಂಬೈ ಜನತೆ ಗಾಬರಿಯಾಗಬಾರದು ಎಂದು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಜನರಲ್ಲಿ ಧೈರ್ಯ ತುಂಬಿದ್ದಾರೆ.
ಪೊಲೀಸರಿಗೆ ಇಂತಹ ಬೆದರಿಕೆಗಳು ಬರುತ್ತಲೇ ಇರುತ್ತವೆ. ನಾವು ಸದಾ ಜಾಗೃತರಾಗಿದ್ದೇವೆ. ಬೆದರಿಕೆಗಳು ಬಂದಾಗ ನಾವು ತನಿಖೆ ಮಾಡುತ್ತೇವೆ. ಯಾವುದೇ ಅಪಾಯವಿಲ್ಲ. ಜನರು ಯಾವುದೇ ರೀತಿ ಭಯಪಡಬೇಡಿ. ಆದ್ರೆ ನಿವಾಸಿಗಳು ಜಾಗರೂಕರಾಗಿರಬೇಕು. ಅಪರಿಚಿತ ಹಾಗೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಲ್ಲಿ ಮುಂಬೈ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.
ನಿನ್ನೆಯೂ ಬಂದಿತ್ತು ಭಯೋತ್ಪಾದಕ ದಾಳಿ ಬೆದರಿಕೆ:ತಾಲಿಬಾನ್ನಿಂದ ಮುಂಬೈ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಬಂದಿತ್ತು. ಮುಂಬೈ ಪೊಲೀಸರ ಪ್ರಕಾರ, ಈ ಬೆದರಿಕೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಇ-ಮೇಲ್ ಮೂಲಕ ನೀಡಲಾಗಿತ್ತು. ಮುಂಬೈನ ಎನ್ಐಎ ಕಚೇರಿಗೆ ಗುರುವಾರ ಈ ಇಮೇಲ್ ಬಂದಿದೆ. ಇದರ ಆಧಾರದ ಮೇಲೆ ಮುಂಬೈ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್) ಎಚ್ಚರಿಕೆ ಕೊಡಲಾಗಿತ್ತು.