ಥಾಣೆ (ಮಹಾರಾಷ್ಟ್ರ) :ಮಹಾರಾಷ್ಟ್ರದ ಥಾಣೆಯಲ್ಲಿ ಲಿಫ್ಟ್ ಕುಸಿದು 6 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಥಾಣೆಯಲ್ಲಿನ ಹೈಲ್ಯಾಂಡ್ ಪಾರ್ಕ್ನಲ್ಲಿನ ನಾರಾಯಣಿ ಶಾಲೆಯ ಪಕ್ಕದಲ್ಲಿರುವ ರನ್ವಾಲ್ ಗಾರ್ಡನ್‌ನಲ್ಲಿ ಈ ದುರಂತ ಸಂಭವಿಸಿದೆ. ಸ್ಥಳೀಯರು ನೀಡಿದ ಮಾಹಿತಿ ಆಧಾರದ ಮೇಲೆ ಅಗ್ನಿಶಾಮಕ ದಳ, ವಿಪತ್ತು ರಕ್ಷಣಾ ಪಡೆ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತರಲ್ಲಿ ಐವರು ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಥಾಣೆಯ ಬಾಲ್ಕಮ್ ಪ್ರದೇಶದಲ್ಲಿ 40 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಎಲ್ಲ ಕೆಲಸಗಳು ಮುಗಿದು ಕ್ಯೂರಿಂಗ್ ಕೆಲಸ ನಡೆಯುತ್ತಿದೆ. ಇಂದು (ಭಾನುವಾರ) ಸಂಜೆ ಕಾರ್ಮಿಕರು ನೀರು ಹರಿಸಿ ಮೇಲಿನ ಅಂತಸ್ತಿನಿಂದ ಕೆಳಕ್ಕೆ ಲಿಫ್ಟ್‌ನಲ್ಲಿ ಬರುತ್ತಿದ್ದಾಗ ಅವಘಡ ಸಂಭವಿಸಿದೆ. ಲಿಫ್ಟ್ ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದ ಸ್ಥಳದಲ್ಲೇ 6 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಲಿಫ್ಟ್ ಏಕಾಏಕಿ ಕುಸಿದುಬಿದ್ದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಲಿಫ್ಟ್ನ ಸ್ಥಿತಿ ಮತ್ತು ಅದರಲ್ಲಿನ ತಾಂತ್ರಿಕ ದೋಷವನ್ನು ಪತ್ತೆ ಮಾಡಲಾಗುತ್ತಿದೆ.