ಮುಂಬೈ (ಮಹಾರಾಷ್ಟ್ರ):ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ವಿದೇಶಿ ಮಹಿಳಾ ಡಿಜೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ಮುಂಬೈನ ಮ್ಯೂಸಿಕ್ ಈವೆಂಟ್ ಕಂಪನಿ ಮಾಲೀಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯೋಗ ನೀಡುವ ನೆಪದಲ್ಲಿ ಮೆಕ್ಸಿಕೋ ಪ್ರಜೆ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಮ್ಯೂಸಿಕ್ ಈವೆಂಟ್ ಕಂಪನಿಯಾದ ಸ್ಲಿಕ್ ಎಂಟರ್‌ಟೈನ್‌ಮೆಂಟ್ ಮಾಲೀಕ ಪ್ರತೀಕ್ ಪಾಂಡೆ ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತ ವಿವಾಹಿತನಾಗಿದ್ದು, 2020ರಲ್ಲಿ ಮದುವೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ವಿದೇಶಿ ಮಹಿಳೆ ನೀಡಿದ ದೂರಿನಡಿ ಬಾಂದ್ರಾ ಠಾಣೆಯಲ್ಲಿ ದಾಖಲಾದ ಪ್ರಕರಣದ ಆಧಾರದ ಮೇಲೆ ಪೊಲೀಸರು, ಈಗಾಗಲೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಡಿಸೆಂಬರ್ 2ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಮೋಹಿತೆ ತಿಳಿಸಿದ್ದಾರೆ.
ಮೆಕ್ಸಿಕನ್ ಮಹಿಳೆ ಡಿಜೆಯೊಬ್ಬರು ಮಾಡೆಲ್ ಆಗಲು ಮುಂಬೈಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ಪ್ರತೀಕ್ ಪಾಂಡೆ ಸಂಪರ್ಕಕ್ಕೆ ಬಂದಿದ್ದ. ಆಗ 2019ರಲ್ಲಿ ಮೊದಲಿಗೆ ಆಕೆಯ ಮೊಬೈಲ್ ನಂಬರ್‌ಗೆ ಆರೋಪಿ ಜೋಕ್ ಕಳುಹಿಸುವ ಮೂಲಕ ಸಲುಗೆ ಬೆಳೆಸಿಕೊಂಡಿದ್ದ. ನಂತರ ಬಾಂದ್ರಾದ ತಮ್ಮ ಮನೆಗೆ ಕರೆಸಿಕೊಂಡು ಉದ್ಯೋಗ ನೀಡುವ ನೆಪದಲ್ಲಿ ದೈಹಿಕವಾಗಿ ಕಿರುಕುಳ ನೀಡಿದ್ದ ಎಂದು ಆರೋಪಿಸಿ ಮಹಿಳೆಯು ಪೊಲೀಸರಿಗೆ ಮೂರು ಪ್ರತ್ಯೇಕ ದೂರುಗಳನ್ನು ನೀಡಿದ್ದಾರೆ.