ನವದೆಹಲಿ: ದೂರಸಂಪರ್ಕ ಉದ್ಯಮದಲ್ಲಿನ ಪ್ರಮುಖ ಬೆಳವಣಿಗೆಯೊಂದರಲ್ಲಿ, ದೂರಸಂಪರ್ಕ ಇಲಾಖೆ (DoT) ನಿಂದ ಧನಸಹಾಯ ಪಡೆದಿರುವ ಸ್ಥಳೀಯ 5G ಟೆಸ್ಟ್ ಬೆಡ್ ಯೋಜನೆಯು ಅಂತಿಮ ಹಂತ ತಲುಪಿದೆ. IIT ಬಾಂಬೆ, IIT ದೆಹಲಿ, IIT ಹೈದರಾಬಾದ್, IIT ಮದ್ರಾಸ್, IIT ಕಾನ್ಪುರ್, IISC ಬೆಂಗಳೂರು, SAMEER ಮತ್ತು CEWiT ಎಂಬ ಎಂಟು ಅನುಷ್ಠಾನ ಏಜೆನ್ಸಿಗಳು 36 ತಿಂಗಳ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಗುರುಗ್ರಾಮ್, ಬೆಂಗಳೂರು, ಕೋಲ್ಕತ್ತಾ, ಮುಂಬೈ, ಚಂಡೀಗಢ, ದೆಹಲಿ, ಜಾಮ್‌ನಗರ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಲಖನೌ, ಪುಣೆ, ಗಾಂಧಿ ನಗರ ಸೇರಿದಂತೆ ಮಹಾನಗರಗಳು ಮತ್ತು ದೊಡ್ಡ ನಗರಗಳು ಮುಂದಿನ ವರ್ಷ ದೇಶದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ಮೊದಲ ಸ್ಥಳಗಳಾಗಿವೆ.
ಆತ್ಮನಿರ್ಭರ ಭಾರತದ ಉಪಕ್ರಮವು ಟೆಲಿಕಾಂ ಕ್ಷೇತ್ರದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ತಂತ್ರಜ್ಞಾನದ ಅಗತ್ಯಗಳನ್ನು ಪರಿಹರಿಸಲು ದೊಡ್ಡ ಸಾಹಸವನ್ನೇ ಮಾಡಿವೆ. 5G, ಮುಂಬರುವ 6G, ಕ್ವಾಂಟಮ್ ಕಮ್ಯುನಿಕೇಷನ್ಸ್ ಇತ್ಯಾದಿ ಸೇರಿದಂತೆ ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳಲ್ಲಿ ಈ ಕೆಳಗಿನ ಉಪಕ್ರಮಗಳನ್ನು ನಡೆಸಲಾಗುತ್ತಿದೆ.
224 ರೂ. ಕೋಟಿ ವೆಚ್ಚದ ಈ ಯೋಜನೆಯು 31 ಡಿಸೆಂಬರ್ 2021 ರೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ದೂರದೃಷ್ಟಿಯ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯಾದ ಸ್ಥಳೀಯ 5G ಟೆಸ್ಟ್ ಬೆಡ್, 5G ತಂತ್ರಜ್ಞಾನ ವ್ಯವಸ್ಥೆಯ ಘಟಕಗಳ ಅಭಿವೃದ್ಧಿ, ಪರೀಕ್ಷೆ ಮತ್ತು ಪ್ರಸರಣ ಸಕ್ರಿಯಗೊಳಿಸುತ್ತದೆ. ಜೊತೆಗೆ ದೇಶದಲ್ಲಿ 6G ತಂತ್ರಜ್ಞಾನ ಬಗ್ಗೆಯೂ ತನ್ನ ಕೆಲಸ ನಿರ್ವಹಿಸಲಿದೆ.
DOT ನ ಅಧಿಕೃತ ಹೇಳಿಕೆಯ ಪ್ರಕಾರ, ಬ್ರಾಡ್‌ಬ್ಯಾಂಡ್ ಸಂಪರ್ಕಗಳು ಮಾರ್ಚ್ 2014 ರಲ್ಲಿ 6.1 ಕೋಟಿಯಿಂದ ಜೂನ್ 2021 ರಲ್ಲಿ 79 ಕೋಟಿಗಳಿಗೆ ಏರಿದೆ. ಇದು ಶೇ 1200 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಇಂಟರ್ನೆಟ್ ಸಂಪರ್ಕಗಳು ಮಾರ್ಚ್ 2014 ರಲ್ಲಿ 25.15 ಕೋಟಿಯಿಂದ ಜೂನ್ 2021 ರಲ್ಲಿ 83.37 ಕೋಟಿಗೆ ಜಿಗಿದಿದ್ದು, ಶೇ231 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ತಿಳಿಸಿದೆ.
ಮಾರ್ಚ್ 2014 ರಲ್ಲಿ 93 ಕೋಟಿಯಿಂದ ಸೆಪ್ಟೆಂಬರ್ 2021 ರಲ್ಲಿ ಒಟ್ಟು ದೂರವಾಣಿ ಸಂಪರ್ಕಗಳು 118.9 ಕೋಟಿಗೆ ಏರಿದೆ. ಈ ಅವಧಿಯಲ್ಲಿ 28 % ರಷ್ಟು ಬೆಳವಣಿಗೆಯಾಗಿದೆ. ಸೆಪ್ಟೆಂಬರ್ 2021 ರಲ್ಲಿ ಮೊಬೈಲ್ ಸಂಪರ್ಕಗಳ ಸಂಖ್ಯೆ 1165.97 ಮಿಲಿಯನ್‌ಗೆ ತಲುಪಿದೆ. ಮಾರ್ಚ್ 2014 ರಲ್ಲಿ 75.23% ರಷ್ಟಿದ್ದ ಟೆಲಿ ಸಾಂದ್ರತೆಯು ಸೆಪ್ಟೆಂಬರ್ 2021 ರಲ್ಲಿ 86.89% ಕ್ಕೆ ತಲುಪಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.