ಮಲಪ್ಪುರಂ (ಕೇರಳ): ಬಿಜೆಪಿಗೆ ಸೇರಿ ಒಂದು ವರ್ಷ ಆಗುವುದರೊಳಗೇ 'ಮೆಟ್ರೋ ಮ್ಯಾನ್' ಎಂದು ಜನಪ್ರಿಯರಾಗಿರುವ ಇ. ಶ್ರೀಧರನ್ (89)ಅವರು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದಾರೆ.
ನಿವೃತ್ತ ಮೆಟ್ರೋ ಅಧಿಕಾರಿಯಾಗಿದ್ದ ಶ್ರೀಧರನ್ ಅವರು ಈ ವರ್ಷ ಫೆಬ್ರವರಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಏಪ್ರಿಲ್ನಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ ಕ್ಷೇತ್ರದಿಂದ ಇವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ ಯುಡಿಎಫ್ ಅಭ್ಯರ್ಥಿ ಶಫಿ ಪರಂಬಿಲ್ ವಿರುದ್ಧ 3,840 ಮತಗಳ ಅಂತರದಿಂದ ಸೋಲು ಕಂಡಿದ್ದರು.
1995 ರಿಂದ 2012ರವರೆಗೆ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಶ್ರೀಧರನ್ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಕೊಂಕಣ ರೈಲ್ವೆ ಕನಸನ್ನು ಸಾಕಾರಗೊಳಿಸಿದವರು ಕೂಡಾ ಇವರೇ. ಇವರಿಗೆ 2001ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಇವರು ಮೆಟ್ರೋ ಮ್ಯಾನ್ ಎಂದು ಜನಪ್ರಿಯರಾಗಿದ್ದರು.