ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜರ್ಮನಿಯ ಮೆಟ್ರೋ ಎಜಿ (ಮೆಟ್ರೊ ಕ್ಯಾಶ್ ಅಂಡ್ ಕ್ಯಾರಿ) ಕಂಪನಿಯ ಭಾರತದಲ್ಲಿನ ಸಗಟು ವ್ಯವಹಾರವನ್ನು 2,850 ಕೋಟಿ ರೂಪಾಯಿಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಿದೆ. ಭಾರತದ ಬೃಹತ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ತನ್ನ ಸ್ಥಾನವನ್ನು ಪ್ರಬಲಗೊಳಿಸುವ ಬಿಲಿಯನೇರ್ ಮುಕೇಶ್ ಅಂಬಾನಿ ಸಮೂಹದ ಮತ್ತೊಂದು ಪ್ರಯತ್ನ ಇದಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL), ಇಂದು ಮುಕ್ತಾಯದ ಹೊಂದಾಣಿಕೆಗಳಿಗೆ ಒಳಪಟ್ಟು ಒಟ್ಟು 2,850 ಕೋಟಿ ರೂಪಾಯಿಗಳ ನಗದು ಮೌಲ್ಯಕ್ಕೆ ಸಮಾನ ಪರಿಗಣನೆಗೆ ಮೆಟ್ರೋ ಕ್ಯಾಶ್ & ಕ್ಯಾರಿ ಇಂಡಿಯಾದಲ್ಲಿ 100 ಪ್ರತಿಶತ ಈಕ್ವಿಟಿ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
31ಮೆಟ್ರೋ ಇಂಡಿಯಾ ಸ್ಟೋರ್ ರಿಲಯನ್ಸ್ ತೆಕ್ಕೆಗೆ:ಈ ಸ್ವಾಧೀನದ ಮೂಲಕ, ರಿಲಯನ್ಸ್ ರಿಟೇಲ್ ಪ್ರಮುಖ ನಗರಗಳಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ನೆಲೆಗೊಂಡಿರುವ 31 ದೊಡ್ಡ ಪ್ರಮಾಣದ ಮೆಟ್ರೋ ಇಂಡಿಯಾ ಸ್ಟೋರ್‌ಗಳ ನೆಟ್‌ವರ್ಕ್ ಅನ್ನು ತೆಕ್ಕೆಗೆ ತೆಗೆದುಕೊಂಡಂತಾಗಿದೆ. ಇದರ ಜೊತೆಗೆ ನೋಂದಾಯಿತ ಕಿರಾಣಿ ಅಂಗಡಿಗಳು ಮತ್ತು ಇತರ ಸಾಂಸ್ಥಿಕ ಗ್ರಾಹಕರ ದೊಡ್ಡ ಅಡಿಪಾಯ ಮತ್ತು ಬಲವಾದ ಪೂರೈಕೆದಾರರ ನೆಟ್‌ವರ್ಕ್ ಕೂಡ ರಿಲಯನ್ಸ್ ಗೆ ಸಿಗಲಿವೆ.