ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ದಿನಗಳಲ್ಲಿ ಸೂರ್ಯನ ಪ್ರಖರತೆ ಹಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರ ಆರ್ಎಂಸಿ ಹೇಳಿದೆ.
ಆರ್‌ಎಂಸಿಯ ಹಿರಿಯ ಅಧಿಕಾರಿಯೊಬ್ಬರು ಈ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದು,ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಎರಡರಿಂದ ಮೂರು ಡಿಗ್ರಿ ಸೆಲ್ಸಿಯಸ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ. ಒಳ ಪ್ರದೇಶಗಳು ಸೇರಿ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ ಮುಂಬರುವ ದಿನಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆ ಕಾಣಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಚೆನ್ನೈ ಮತ್ತು ಪುದುಚೇರಿಯಲ್ಲಿ ಸಮುದ್ರದ ಮೇಲಿನ ಗಾಳಿಯಿಂದ ಉಂಟಾಗುವ ಚಂಡಮಾರುತಗಳು ಮಳೆ ತರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಹಿರಿಯ ಅಧಿಕಾರಿ ಹೇಳಿದ್ದಾರೆ.
ರಾಜ್ಯದ ಹಲವು ಕಡೆ ಒಣ ಹವೆ ಮುಂದುವರೆದಿದ್ದು, ಸೂರ್ಯನ ಪ್ರಕಾಶಮಾನತೆ ಹೆಚ್ಚಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳವರೆಗೆ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ದಾಖಲಾಗಬಹುದು ಎಂದು ಇಲಾಖೆ ಅಂದಾಜು ಮಾಡಿದೆ. ತಾಪಮಾನ ಹೆಚ್ಚಳವು ಹೀಗೆ ಮುಂದುವರಿದರೆ, ಕೆಲ ಭಾಗಗಳಲ್ಲಿ ಮಳೆ ತರಬಹುದು ಎಂದು ಅಂದಾಜಿಸಲಾಗಿದೆ. ನೈಋತ್ಯ ಮಾನ್ಸೂನ್ ತಮಿಳುನಾಡಿಗೆ ಅನುಕೂಲಕರ ಸ್ಥಿತಿಯಲ್ಲಿಲ್ಲದ ಕಾರಣ, ಗರಿಷ್ಠ ತಾಪಮಾನ ಸ್ಥಿರವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.