ಸಿಲಿಗುರಿ(ಪಶ್ಚಿಮ ಬಂಗಾಳ): ಕಳೆದ 10 ವರ್ಷಗಳಿಂದ ನಾಪತ್ತೆಯಾಗಿದ್ದ ಮಾನಸಿಕ ವಿಶೇಷಚೇತನ ಯುವತಿಯನ್ನು ಕುಟುಂಬ ಸದಸ್ಯರೊಂದಿಗೆ ಸೇರಿಸುವಲ್ಲಿ ಇಲ್ಲಿನ ವೈದ್ಯಕೀಯ ಕಾಲೇಜ್ವೊಂದು ಯಶಸ್ವಿಯಾಗಿದೆ. ಯುವತಿ 10 ವರ್ಷಗಳ ಹಿಂದೆ ಡೋರ್ಸ್ ಟೀ ತೋಟದಿಂದ ನಾಪತ್ತೆಯಾಗಿದ್ದಳು. ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಚಾರದಿಂದ ಮೀನಾ ಮಿರ್ದಾ ತನ್ನ ಪ್ರೀತಿಪಾತ್ರರ ಬಳಿಗೆ ಮರಳಲು ಸಾಧ್ಯವಾಗಿದೆ.
ಅಕ್ಕ ಮನು ಮಿರ್ದಾ ತನ್ನ ಸಹೋದರಿಯನ್ನು ಮರಳಿ ಪಡೆದ ಸಂತೋಷದಲ್ಲಿದ್ದಾರೆ. ಇದಕ್ಕಾಗಿ ಅವರು ಆಸ್ಪತ್ರೆ ಆಡಳಿತಕ್ಕೆ ಧನ್ಯವಾದ ಹೇಳಿದ್ದಾರೆ. ಮೇಟೇಲಿ ಬ್ಲಾಕ್‌ನ ಕಿಲ್ಕೋಟ್ ಚಹಾ ತೋಟದ ನಿವಾಸಿ ಮೀನಾ ಮಿರ್ದಾ (27) ಹುಟ್ಟಿನಿಂದಲೇ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಕೆಲವೊಮ್ಮೆ ಅವಳು ಒಂದು ಅಥವಾ ಎರಡು ದಿನಗಳವರೆಗೆ ಕಣ್ಮರೆಯಾಗುತ್ತಿದ್ದಳು ಮತ್ತು ನಂತರ ತಾನೇ ಹಿಂತಿರುಗುತ್ತಿದ್ದಳು. ಮೀನಾ ಸುಮಾರು 10 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ಕುಟುಂಬದವರು ಹಣಕಾಸಿನ ತೊಂದರೆಯಿಂದ ತಮ್ಮ ಹುಡುಕಾಟವನ್ನು ಕೈಬಿಟ್ಟರು.
ಕುಟುಂಬಸ್ಥರು ಆಕೆಯನ್ನು ಮತ್ತೆ ಮರಳಿ ಪಡೆಯುತ್ತೇವೆ ಎಂಬ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಮನೆಗೆ ಕರೆತರುವಲ್ಲಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ಮುಂದಾದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ಫೋಟೋಗಳನ್ನು ಆಸ್ಪತ್ರೆ ಆಡಳಿತ ಮಂಡಳಿ ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸ್ ಆಡಳಿತಕ್ಕೆ ಕಳುಹಿಸಿತ್ತು. ಈ ಮೂಲಕ ಒಂದು ದಶಕದ ನಂತರ ಆರೋಗ್ಯಾಧಿಕಾರಿಗಳ ನೆರವಿನಿಂದ ಮೀನಾ ಮಿರ್ದಾ ತನ್ನ ಮನೆಗೆ ಮರಳಲು ಸಾಧ್ಯವಾಯಿತು.