ರಾಂಚಿ(ಜಾರ್ಖಂಡ್):ಮಹಿಳಾ ಸಬಲೀಕರಣದ ಬಗ್ಗೆ ಧ್ವನಿ ಎತ್ತುವುದು ಸಹಜ. ವಿಚಿತ್ರ ಎಂದರೆ ನಿನ್ನೆಯ ಗಾಂಧಿ ಜಯಂತಿಯಂದು ಕೆಲವರು ಪುರುಷ ಆಯೋಗ ರಚನೆಗೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಜಾರ್ಖಂಡ್ನ ರಾಂಚಿಯಲ್ಲಿ ಗಾಂಧೀಜಿ ಪ್ರತಿಮೆಯ ಮುಂದೆ ಕೆಲ ಪುರುಷರು ತಮ್ಮ ಪತ್ನಿಯಿಂದಾಗುವ ದೌರ್ಜನ್ಯವನ್ನು ತಡೆಯಲು ಮಹಿಳಾ ಆಯೋಗದಂತೆ ಪುರುಷ ಆಯೋಗವನ್ನು ರಚಿಸಬೇಕು. ತಮ್ಮ ಹಕ್ಕುಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದ್ದಾರೆ.
"ಭಾರತೀಯ ಕುಟುಂಬವನ್ನು ಉಳಿಸಿ" ಎಂಬ ಘೋಷಣೆಯಡಿ ಹಲವು ಪುರುಷರು ಹಲವು ಭಿತ್ತಿಪತ್ರಗಳೊಂದಿಗೆ ಪ್ರತಿಭಟನೆ ನಡೆಸಿದರು. ವರದಕ್ಷಿಣೆ ತಡೆ ಕಾಯ್ದೆ, ಜೀವನಾಂಶ ನೀಡುವ ಸೆಕ್ಷನ್ 498 ಮತ್ತು ಸೆಕ್ಷನ್ 125 ರ ದುರುಪಯೋಗ ಆಗುತ್ತಿವೆ. ಮಹಿಳೆಯರು ಸುಳ್ಳು ದೂರು ನೀಡಿ ಪತಿಯಂದಿರನ್ನು ಜೈಲಿಗೆ ಹಾಕಿಸುತ್ತಿದ್ದಾರೆ. ಇದರಿಂದ ವೈಯಕ್ತಿಕ ಭದ್ರತೆಗೆ ಚ್ಯುತಿ ಬಂದಿದ್ದು, ತಮಗಾಗಿ ಆಯೋಗ ರಚಿಸಬೇಕು ಎಂದು ಒಕ್ಕೋರಲ ಕೂಗು ಕೇಳಿಬಂದಿದೆ.
ಪುರುಷ ಆಯೋಗ ರಚನೆಗೆ ಒತ್ತಾಯಿಸಿ ಗಂಡಸರ ಪ್ರತಿಭಟನೆ ಬಿಹಾರ ಮೂಲದ ವ್ಯಕ್ತಿಯೋರ್ವ ಮಾತನಾಡಿ, ಹೆಂಡತಿ ಮಾಡಿದ ಸುಳ್ಳು ಆರೋಪಗಳ ಪ್ರಕರಣದ ವಿರುದ್ಧ ತಾನು ಕಳೆದ 21 ವರ್ಷಗಳಿಂದ ಹೋರಾಡುತ್ತಿದ್ದೇನೆ. ತನ್ನಾಕೆ ಹಳ್ಳಿಯಲ್ಲಿ ವಾಸಿಸಲು ಇಷ್ಟಪಡದಿರುವುದೇ ಇದಕ್ಕೆ ಕಾರಣವಾಗಿದೆ. ವಿಚ್ಛೇದನ ಕೋರಿದ್ದಲ್ಲದೇ, ತನ್ನಿಂದ ಜೀವನಾಂಶ ಕೇಳಿದ್ದಾರೆ. ವರದಕ್ಷಿಣೆ ಕಿರುಕುಳ ಕೇಸ್ ಕೂಡ ದಾಖಲಿಸಿದ್ದಾರೆ. ಇದರಿಂದ ತಾವು ಜೀವನದಲ್ಲಿ ನೆಮ್ಮದಿಯನ್ನೇ ಕಳೆದುಕೊಂಡಿದ್ದೇನೆ. ತಮಗೂ ಭದ್ರತೆ ನೀಡುವ ಆಯೋಗ ರಚಿಸಿ ಎಂದು ಕೋರಿದರು.
ಮಹಿಳೆಯರಿಂದ ಕಾನೂನು ಭಯೋತ್ಪಾದನೆ:ಮಹಿಳೆಯರು ಸಣ್ಣ ಕಾರಣಗಳಿಗೆ ತಮ್ಮನ್ನು ತೊರೆದು ವಿಚ್ಛೇದನ ಬಯಸುತ್ತಾರೆ. ವರದಕ್ಷಿಣೆ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ. ಇದರಿಂದ ತಾನು ಜೈಲು ಶಿಕ್ಷೆ ಅನುಭವಿಸಂತಾಯಿತು. ಇದರಿಂದ ನನ್ನ ಕೆಲಸವೂ ಹೋಯಿತು. ಪುರುಷರ ಮೇಲೆ ಮಹಿಳೆಯರಿಂದ ಆಗುತ್ತಿರುವ ಕಾನೂನು ಭಯೋತ್ಪಾದನೆಯನ್ನು ತಡೆಯಲು ಆಯೋಗ ಬೇಕಿದೆ ಎಂದು ಇನ್ನೊಬ್ಬ ನೊಂದ ವ್ಯಕ್ತಿ ಒತ್ತಾಯಿಸಿದರು.
ಹೆಂಡ್ತಿ ಕಿರುಕುಳಕ್ಕೆ 4 ಲಕ್ಷ ಪುರುಷರ ಸಾವು:ಪತ್ನಿಯ ಕಿರುಕುಳ, ಸುಳ್ಳು ಆರೋಪದ ಪ್ರಕರಣಗಳಿಂದ ದೇಶದಲ್ಲಿ ಪ್ರತಿ ವರ್ಷ 4 ಲಕ್ಷಕ್ಕೂ ಅಧಿಕ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಗಂಡಂದಿರ ರಕ್ಷಣೆಗಾಗಿ, ಭದ್ರತೆಗಾಗಿ ಆಯೋಗವನ್ನು ರಚನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಓದಿ:ಧಾರ್ಮಿಕ ಬಾವುಟ ಹಾರಿಸುವ ವಿಚಾರಕ್ಕೆ ಕೋಮು ಗಲಭೆ: 36 ಜನರ ಬಂಧನ