ಕೊಲ್ಲಂ(ಕೇರಳ):ಸೀಮಿತ ವಯೋಮಾನದ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ನೆಲೆಸಿರುವ ಶಬರಿಮಲೆ ಪ್ರವೇಶಿಸಲು ಅವಕಾಶವಿಲ್ಲ. ಅದರಂತೆ ಕೇರಳದ ಈ ದೇವಾಲಯದಲ್ಲಿ ಪುರುಷರಿಗೂ ಪ್ರವೇಶ ನಿಷಿದ್ಧ. ಒಂದು ವೇಳೆ ದರ್ಶನಕ್ಕೆ ಹೋಗಬೇಕು ಎಂದಾದಲ್ಲಿ ಪುರುಷರು ವಿಶೇಷ ವೇಷ ಧರಿಸಲೇಬೇಕು. ಅಂದರೆ, ಸಂಪೂರ್ಣವಾಗಿ ಮಹಿಳೆಯಂತೆ ಸಿಂಗರಿಸಿಕೊಳ್ಳಬೇಕು. ಥೇಟ್ ಮಹಿಳೆ ಎಂಬಂತೆ ಪುರುಷ ರೆಡಿಯಾಗಬೇಕು.
ನಿಜ!, ಈ ದೇವಸ್ಥಾನ ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ. ಕೊಟ್ಟಂಕುಳಂಗರ ದೇವಿ ಎಂದು ಕರೆಯಲಾಗುವ ದೈವದ ದೇವಸ್ಥಾನದೊಳಗೆ ಪುರುಷರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇಲ್ಲಿಗೆ ಮಹಿಳೆಯರು ಮತ್ತು ಮಂಗಳಮುಖಿಯರಿಗೆ ಮಾತ್ರ ಪ್ರವೇಶ. ದೇವಸ್ಥಾನದೊಳಗೆ ಪುರುಷರು ಹೋಗಬೇಕೆಂದರೆ ಅವರು ಮಹಿಳೆಯರಂತೆ ವೇಷ ಧರಿಸಿ, ಮೇಕಪ್ ಮಾಡಿಕೊಳ್ಳಬೇಕು.
ಪುರುಷರಿಗೆ ನಿಷಿದ್ಧವಾಗಿರುವ ಈ ದೇವಸ್ಥಾನದೊಳಕ್ಕೆ ಯಾವುದೇ ವಯೋಮಾನದವರು ಬೇಕಾದರೂ ಹೋಗಬಹುದು. ಆದರೆ ವಿಶೇಷ ರೀತಿಯಲ್ಲಿ ಮಾತ್ರ. ಇಲ್ಲಿ ಅವರು ಪೂಜೆ ಸಲ್ಲಿಸಬೇಕಾದರೆ, ವಿಧಿಸಲಾದ ಷರತ್ತಿನಂತೆ ಪುರುಷರು ಮಹಿಳೆಯರ ಉಡುಪುಗಳನ್ನು ಧರಿಸಿ, ಅವರಂತೆಯೇ ಮೇಕಪ್ ಹಾಕಿಕೊಳ್ಳಬೇಕು. ಪುರುಷರು ಕಡ್ಡಾಯವಾಗಿ ಷೋಡಶ ಅಲಂಕಾರ ಅಂದರೆ 16 ಬಗೆಯ ಅಲಂಕಾರ ಮಾಡಿಕೊಳ್ಳಲೇಬೇಕಂತೆ. ಪುರುಷ ಪೂರ್ಣವಾಗಿ ಮಹಿಳಾ ರೂಪ ಧರಿಸಿದ ಬಳಿಕವೇ ಪ್ರವೇಶಿಸು ಅವಕಾಶ. ಹಾಗಾಗಿ ಇಲ್ಲಿ ಚಿಕ್ಕ ವಯಸ್ಸಿನಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸ್ತ್ರೀಯರ ವೇಷ ಧರಿಸುತ್ತಾರೆ ಎಂಬುದು ವಿಶೇಷ.
ದೇವಸ್ಥಾನದಲ್ಲಿದೆ ಮೇಕಪ್ ರೂಮ್:ಪುರುಷರು ದೇವಸ್ಥಾನ ಪ್ರವೇಶಿಸಲು ಮೇಕಪ್ ಹಾಕಿಕೊಳ್ಳಬೇಕಿದ್ದು ಒಂದು ಕೋಣೆಯನ್ನು ಮೀಸಲಿಡಲಾಗಿದೆ. ಅಲ್ಲಿಯೇ ಗಂಡಸರು ಮಹಿಳೆಯಂತೆ ರೆಡಿಯಾಗಬಹುದು. ಇದಕ್ಕಾಗಿ ಅವರು ಹೆಂಡತಿ, ಮಕ್ಕಳು, ತಾಯಿ ಅಥವಾ ಇತರೆ ಯಾರದ್ದಾದರೂ ಸಹಾಯ ಪಡೆದುಕೊಳ್ಳಬಹುದು. ಬರೀ ಹೆಣ್ಣು ಮಕ್ಕಳ ಹಾಗೆ ಸಿದ್ಧವಾದರೆ ಸಾಲದು, ಷೋಡಶ ಅಲಂಕಾರ ಇರಲೇಬೇಕಂತೆ.
ದೇವಾಲಯದಲ್ಲಿ ಪ್ರತಿ ವರ್ಷ ಮಾರ್ಚ್ 23 ಮತ್ತು 24 ರಂದು ಚಾಮ್ಯವಿಳಕ್ಕು ಉತ್ಸವವನ್ನು ಮಾಡಲಾಗುತ್ತದೆ. ಅಂದು ಗಂಡಸರು ಮಹಿಳೆಯರಂತೆ ವೇಷ ಧರಿಸಿಕೊಂಡು ತಮ್ಮ ಕುಟುಂಬದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಮಾಡುವ ಆರಾಧನೆಯಿಂದ ಶುಭ ನಡೆಯುತ್ತದೆ ಎಂಬುದು ಭಕ್ತರ ನಂಬಿಕೆ. ಹೆಣ್ಣಿನ ಅಲಂಕಾರದಲ್ಲಿ ಪೂಜೆ ಮಾಡುವುದರಿಂದ ಸುಂದರ ಹೆಂಡತಿ, ಉದ್ಯೋಗ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಹಬ್ಬದ ದಿನಗಳಲ್ಲಿ ಹಲವೆಡೆಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.
ದೇವಾಲಯಕ್ಕಿದೆ ವಿಶೇಷ ಇತಿಹಾಸ:ಈ ದೇವಾಲಯ ನಿರ್ಮಾಣವಾಗಿದ್ದೇ ವಿಶೇಷವಾಗಿದೆ. ಇಲ್ಲಿರುವ ದೇವಿ ಉದ್ಭವಮೂರ್ತಿಯಾಗಿದೆ. ಕಾಡಿನಂತಿದ್ದ ಪ್ರದೇಶದಲ್ಲಿ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದಾಗ ವಿಗ್ರಹವನ್ನು ಕಂಡಿದ್ದಾರೆ. ಬಳಿಕ ಅವರು ಪೂಜೆ ಸಲ್ಲಿಸಿದ್ದಾರೆ. ಮಹಿಳೆಯರ ವೇಷ ಧರಿಸಿ ಪೂಜೆ ಸಲ್ಲಿಸಿದ್ದರು. ಅಂದಿನಿಂದ ಮಹಿಳಾ ಪೂಜೆ ಇಲ್ಲಿ ನಡೆಯುತ್ತಿದೆ. ಗಂಡಸರಿಗೆ ಇಲ್ಲಿ ಪ್ರವೇಶವನ್ನು ನೀಡುತ್ತಿರಲಿಲ್ಲ. ಬಳಿಕ ವೇಷ ಬದಲಿಸಿಕೊಂಡು ಬರಲು ಅವಕಾಶ ನೀಡಲಾಗಿದೆ. ಈಚೆಗೆ ಈ ದೇವಾಲಯದಲ್ಲಿ ಅದ್ಧೂರಿ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಪುರುಷರು ಮಹಿಳೆಯರಂತೆ ವೇಷ ಧರಿಸಿಕೊಂಡು ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಮಂಗೋಲಿಯನ್ ಬಾಲಕನಿಗೆ ಬೌದ್ಧ ಧರ್ಮದಲ್ಲಿ ಮೂರನೇ ಅತ್ಯುನ್ನತ ನಾಯಕನ ಪಟ್ಟ ನೀಡಿದ ದಲೈ ಲಾಮಾ