ಕರ್ನಾಟಕ

karnataka

By ETV Bharat Karnataka Team

Published : Oct 26, 2023, 10:32 PM IST

Updated : Oct 26, 2023, 10:41 PM IST

ETV Bharat / bharat

ಪ್ರಧಾನಿ ಮೋದಿಗೆ ನೀಡಲಾದ 912 ಸ್ಮರಣಿಕೆಗಳ ಇ-ಹರಾಜು ಪ್ರಕ್ರಿಯೆ: ಹರಾಜಿನಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ, ಬಿದ್ರಿ ಕಲೆಯ ಬಸವಣ್ಣ ಮೂರ್ತಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಸ್ಮರಣಿಕೆಗಳ 5ನೇ ಸುತ್ತಿನ ಇ-ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ತಿಂಗಳ ಅಂತ್ಯದವರೆಗೂ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಸ್ಮರಣಿಕೆಗಳ ಹರಾಜು
ಪ್ರಧಾನಿ ನರೇಂದ್ರ ಮೋದಿ ಸ್ಮರಣಿಕೆಗಳ ಹರಾಜು

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಸ್ಮರಣಿಕೆಗಳ ಇ-ಹರಾಜು ನಡೆಯುತ್ತಿದ್ದು, ಇದೇ ಅಕ್ಟೋಬರ್​ 31ರ ವರೆಗೆ ಮುಂದುವರಿಯಲಿದೆ. ಸದ್ಯ ಸ್ಮರಣಿಕೆಗಳನ್ನು ದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಒಟ್ಟು 912 ವಿವಿಧ ರೀತಿಯ ವಸ್ತುಗಳು ಹರಾಜಿಗೆ ಲಭ್ಯವಿವೆ. 100 ರೂಪಾಯಿ ಆರಂಭಿಕ ಬೆಲೆ ಇದೆ. ಬೇಕಾದವರು https://pmmementos.gov.in ಲಿಂಕ್‌ಗೆ ಲಾಗಿನ್ ಆಗಿ ಇ-ಹರಾಜಿನಲ್ಲಿ ಬಿಡ್​ ಮಾಡಿ ವಸ್ತುಗಳನ್ನು ಖರೀದಿ ಮಾಡಬಹುದು.

ಅಕ್ಟೋಬರ್​ 2 ರಿಂದ ಇ-ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಸ್ತುತ 5ನೇ ಸುತ್ತಿನ ಇ-ಹರಾಜು ನಡೆಯುತ್ತಿದ್ದು, ಅಕ್ಟೋಬರ್ 31 ರವರೆಗೆ ಮುಂದುವರಿಯಲಿದೆ. ಹರಾಜಿನಲ್ಲಿ ಬಂದ ಆದಾಯವು ನಮಾಮಿ ಗಂಗೆ ಯೋಜನೆಗೆ ಬಳಕೆ ಮಾಡಲಾಗುತ್ತದೆ.

ಹರಾಜಿನಲ್ಲಿ ಇರುವ ಸ್ಮರಣಿಗಳು:5ನೇ ಸುತ್ತಿನ ಇ-ಹರಾಜಿನಲ್ಲಿ ಭಗವಾನ್ ಲಕ್ಷ್ಮೀ ನಾರಾಯಣ ಮತ್ತು ರುಕ್ಮಿಣಿ ದೇವಿಯ ಪ್ರತಿಮೆ, ಕರುವಿನೊಂದಿಗೆ ಇರುವ ಕಾಮಧೇನು, ಜೆರುಸಲೆಮ್‌ನ ಸ್ಮರಣಿಕೆ, ಆರನ್ಮುಲ ಕನ್ನಡಿ, ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಾನ್ ಅವರ ಹಿತ್ತಾಳೆಯ ಪ್ರತಿಮೆ, ರಾಮ್ ದರ್ಬಾರ್ ಪ್ರತಿಮೆ, ಮತ್ತು ಗೋಲ್ಡನ್ ಟೆಂಪಲ್ ಮಾದರಿ, ಬನಾರಸ್ ಘಾಟ್‌ನ ಪೇಂಟಿಂಗ್, ಕ್ರೇವ್ಡ್ ಸ್ಯಾಂಡಲ್‌ವುಡ್ ವೀಣೆ, ಕಾಶಿ ಕಲಶ, ಪಿಎಂ ಮೋದಿ ಮತ್ತು ಅವರ ವರ್ಣಚಿತ್ರಗಳು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ, ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಡಿಜಿಟಲ್ ಮುದ್ರಣ, ಕೇದಾರನಾಥ ಧಾಮದ ವರ್ಣಚಿತ್ರಗಳು ಮತ್ತು ಇತರ ಸ್ಮರಣಿಕೆಗಳು.

ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಸಭೆಯಲ್ಲಿ ಸಿಕ್ಕ ಮೂರು ಸ್ಮರಣಿಕೆಗಳು ಸಾರ್ವಜನಿಕರಿಂದ ಗಮನ ಸೆಳೆಯುತ್ತಿವೆ. ಪ್ರಸ್ತುತ ಜನರು ಭಗವಾನ್​ ಲಕ್ಷ್ಮಿ ನಾರಾಯಣ ವಿಠ್ಠಲ್ ಮತ್ತು ರುಕ್ಮಿಣಿ ದೇವಿಯ ಸ್ಮರಣಿಕೆ ಮೇಲೆ ಗರಿಷ್ಠ ಬಿಡ್‌ಗಳನ್ನು ಸಲ್ಲಿಸುತ್ತಿದ್ದಾರೆ. ನಂತರದಲ್ಲಿ ಕರು ಜೊತೆಗಿನ ಕಾಮಧೇನು, ಜೆರುಸಲೆಮ್‌ನ ಸ್ಮರಣಿಕೆಗೆ ಹೆಚ್ಚು ಬೇಡಿಕೆ ಇದೆ. ಹಲವು ಕಲಾತ್ಮಕ ಕುಸುರಿಯ ಸ್ಮರಣಿಕೆಗಳು, ದೇಶಿ ಕಲಾ ಪ್ರಕಾರಗಳು ವಸ್ತುಸಂಗ್ರಹಾಲಯಗಳಲ್ಲಿ ಅಥವಾ ಕಲಾಭಿಮಾನಿಗಳ ಮನೆಗಳಲ್ಲಿ ಸ್ಥಾನ ಪಡೆದಿವೆ.

ಕರ್ನಾಟಕದ ಸ್ಮರಣಿಗಳೂ ಹರಾಜಿಗೆ:ಕರ್ನಾಟಕದ ಯಕ್ಷಗಾನ ನೃತ್ಯದ ಶಿರಸ್ತ್ರಾಣ, ಬಿದ್ರಿ ಕಲೆಯ ಬಸವಣ್ಣನ ಪ್ರತಿಮೆ, ಶಿವಮೊಗ್ಗ ವಿಮಾನ ನಿಲ್ದಾಣದ ಪ್ರತಿರೂಪ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ದುರ್ಗಾ ಬಾಯಿಯವರ ಗೊಂಡ ಚಿತ್ರಕಲೆ, ಚಂಬಾ ರುಮಾಲ್, ಕವಾಡ ಕಲೆಯ ಸ್ಮರಣಿಕೆಗಳು ಕೂಡ ಇದರಲ್ಲಿವೆ.

ಹರಾಜಿನ ಬೆಲೆ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಸ್ಮರಣಿಕೆಗಳ ಹರಾಜಿನಲ್ಲಿ ಬಂದ ಹಣವನ್ನು ವಿನಿಯೋಗ ಮಾಡಲಾಗುವುದು ಎಂದು ಪ್ರಧಾನಿ ಕಚೇರಿ ಈ ಹಿಂದೆ ಹೇಳಿಕೆ ನೀಡಿತ್ತು. ಅದರಂತೆ ಪ್ರತಿ ಸ್ಮರಣಿಕೆಗಳ ವಿಶೇಷತೆ ಆಧರಿಸಿ 100 ರೂಪಾಯಿಯಿಂದ ಹಿಡಿದು 65 ಲಕ್ಷ ರೂಪಾಯಿವರೆಗೂ ವಸ್ತುಗಳು ಹರಾಜಿಗೆ ಇಡಲಾಗಿದೆ. ಸರ್ಕಾರ ನೀಡಿದ ಅಧಿಕೃತ ಲಿಂಕ್​ ಮೂಲಕ ಇ- ಹರಾಜಿನಲ್ಲಿ ಯಾರು ಬೇಕಾದರೂ ಪಾಲ್ಗೊಂಡು ಸ್ಮರಣಿಕೆಗಳನ್ನು ಖರೀದಿ ಮಾಡಬಹುದು.

ಇದನ್ನೂ ಓದಿ:6 ತಿಂಗಳಲ್ಲಿ 7 ಸಾವಿರ ಜನರಿಗೆ ನಾಯಿ ಕಡಿತ! ರಕ್ಷಣೆ ಕೋರಿ ಪ್ರಧಾನಿ, ರಾಷ್ಟ್ರಪತಿಗೆ ಪತ್ರ

Last Updated : Oct 26, 2023, 10:41 PM IST

ABOUT THE AUTHOR

...view details