ನವದೆಹಲಿ:ದೆಹಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದರು. ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೇಕೆದಾಟು ಯೋಜನೆಯಿಂದ ತಮಿಳುನಾಡಿನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ. ಈ ಯೋಜನೆ ಖಂಡಿತವಾಗಿ ಅಸ್ವಿತ್ವಕ್ಕೆ ಬರಲಿದೆ ಎಂದಿದ್ದಾರೆ.
ಮೇಕೆದಾಟು ಯೋಜನೆ ಶೇ.100ರಷ್ಟು ಜಾರಿ ಎಂದ ಬಿಎಸ್ವೈ ಮೇಕೆದಾಟು ಯೋಜನೆ ವಿಚಾರವಾಗಿ ಎಲ್ಲರೊಂದಿಗೆ ಚರ್ಚಿಸುತ್ತೇನೆ ಹಾಗೂ ಪೂರ್ಣಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬಿಎಸ್ವೈ ಹೇಳಿದ್ದಾರೆ. ಈಗಾಗಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೆ ಮನವಿ ಮಾಡಿದ್ದೇನೆ ಎಂದಿರುವ ಸಿಎಂ, ಮೇಕೆದಾಟು ಯೋಜನೆ ಪ್ರಾರಂಭಿಸುವುದರಿಂದ ತಮಿಳುನಾಡಿನ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಅವರಿಗೆ ಬರೆದಿರುವ ಪತ್ರದಲ್ಲಿ ಮನವರಿಕೆ ಮಾಡಿದ್ದೇನೆ ಎಂದರು.
ಇದನ್ನೂ ಓದಿರಿ: ಅಂಜುಂ ಖಾನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿವಂ ದುಬೆ
ಮೇಕೆದಾಟು ಯೋಜನೆ ಕಾಮಗಾರಿ ಆರಂಭಿಸುವ ಬಗ್ಗೆ ಯಾವುದೇ ಗೊಂದಲ ಬೇಡ. ಈ ಯೋಜನೆ ಶೇ. 100ರಷ್ಟು ಜಾರಿಗೆ ತರಲಾಗುವುದು ಎಂದು ಕರ್ನಾಟಕ ಜನರಿಗೆ ಭರವಸೆ ನೀಡುತ್ತೇನೆ. ತಮಿಳುನಾಡು ಮತ್ತು ಪುದುಚೇರಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ನಮಗೆ ಹೆದರಿಕೆ ಇಲ್ಲ. ಈ ಯೋಜನೆ ಪ್ರಾರಂಭಿಸಲು ನಮಗೆ ಸಂಪೂರ್ಣವಾದ ಹಕ್ಕಿದೆ ಎಂದರು.
ಮೇಕೆದಾಟು ಯೋಜನೆಯಿಂದ ಕಾವೇರಿ ನದಿಗೆ ಅಡ್ಡಲಾಗಿ 9,000 ಕೋಟಿ ರೂ.ಗಳ ಜಲಾಶಯ ನಿರ್ಮಾಣ ಹಾಗೂ ಕುಡಿಯುವ ನೀರಿನ ಯೋಜನೆಗೆ 4.75 ಟಿಎಂಸಿ ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. ಆದರೆ ಇದರಿಂದ ತಮಿಳುನಾಡು ರೈತರಿಗೆ ತೊಂದರೆ ಆಗಲಿದೆ ಎಂಬುದು ಅಲ್ಲಿನ ಸರ್ಕಾರ ನಿಲುವು. ಇದೇ ಕಾರಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದೆ.
ಮೇಕೆದಾಟು ವಿಚಾರವಾಗಿ ತಮಿಳುನಾಡಿನ ನಿಯೋಗ ನಿನ್ನೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಜೊತೆ ಸಭೆ ನಡೆಸಿ, ಯೋಜನೆ ಸ್ಥಾಪಿಸದಂತೆ ತಡೆಬೇಕು ಎಂದು ಮನವರಿಕೆ ಮಾಡಿದೆ.