ನವದೆಹಲಿ: ಕಳೆದ ಕೆಲವು ದಿನಗಳಿಂದ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ಮೇಕೆದಾಟು ಯೋಜನೆ ವಿಚಾರವಾಗಿ ಗುದ್ದಾಟ ನಡೆಯುತ್ತಿದೆ. ಈ ಸಮರ ಈಗ ಕೇಂದ್ರ ಸರ್ಕಾರದ ಅಂಗಳ ತಲುಪಿದೆ.
ನವದೆಹಲಿಯಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಜಲಶಕ್ತಿ ಸಚಿವರಿಗೆ ಮೇಕೆದಾಟು ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಂದು ಕೂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿರುವ ಸ್ಟಾಲಿನ್, ಕರ್ನಾಟಕದ ಮೇಕೆದಾಟು ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ನಾವು ಕರ್ನಾಟಕದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ. ಅದಕ್ಕೆ ಮಹತ್ವ ಕೂಡ ಇಲ್ಲ ಎಂದರು.
ಈ ಯೋಜನೆ ಮುಂದುವರೆಸಲು ಕರ್ನಾಟಕಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಂದ ಭರವಸೆ ಸಿಕ್ಕಿದೆ. ಈ ಪ್ರಕರಣ ಸದ್ಯ ಸುಪ್ರೀಂಕೋರ್ಟ್ನಲ್ಲಿದೆ. ನಾವು ಸಮಸ್ಯೆಯನ್ನು ಕಾನೂನಿನ ಮೂಲಕ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಮೇಕೆದಾಟು ವಿಚಾರವಾಗಿ ಜಲಸಂಪನ್ಮೂಲ ಸಚಿವರು ಈಗಾಗಲೇ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ತಮಿಳುನಾಡಿನ ನಿಯೋಗ ಕೇಂದ್ರಕ್ಕೆ ತೆರಳಿ ಜಲಶಕ್ತಿ ಸಚಿವರಿಗೆ ಮನವಿ ಸಹ ಸಲ್ಲಿಕೆ ಮಾಡಿದೆ.
ಇದನ್ನೂ ಓದಿ: ಎಸ್ಸಿ,ಎಸ್ಟಿ,ಹಿಂದುಳಿದ,ರೈತರ ಮಕ್ಕಳು ಸಚಿವರಾಗಿದ್ದು ವಿಪಕ್ಷಕ್ಕೆ ಜೀರ್ಣಿಸಲು ಆಗ್ತಿಲ್ಲ: ಮೋದಿ ವಾಗ್ದಾಳಿ
ಇದೇ ವಿಚಾರವಾಗಿ ದೆಹಲಿಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮೇಕೆದಾಟು ಯೋಜನೆ ವಿಚಾರವಾಗಿ ನಾವು ತಮಿಳುನಾಡಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಈ ಯೋಜನೆಯನ್ನು ಶೇ. 100ರಷ್ಟು ಜಾರಿಗೆ ತರುವುದಾಗಿ ಹೇಳಿದ್ದರು.