ಶ್ರೀನಗರ: ಬಿಜೆಪಿಯವರು ನನ್ನ ಜೊತೆ ರಾಜಕೀಯವಾಗಿ ಹೋರಾಟ ನಡೆಸದೇ ಎನ್ಐಎ, ಇಡಿ ಮತ್ತು ಸಿಬಿಐ ಅಂತಹ ತನಿಖಾ ಸಂಸ್ಥೆಗಳನ್ನು ಮುಂದೆ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
'ಬಿಜೆಪಿ ನನ್ನೊಂದಿಗೆ ರಾಜಕೀಯವಾಗಿ ಹೋರಾಟ ನಡೆಸಲಿ, ತನಿಖಾ ಸಂಸ್ಥೆಗಳ ಮೂಲಕವಲ್ಲ': ಮುಫ್ತಿ ಕಿಡಿ - ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷ ಮೆಹಬೂಬಾ ಮುಫ್ತಿ
ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಫಲಿತಾಂಶದ ಕುರಿತಂತೆ ಇಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷ ಮೆಹಬೂಬಾ ಮುಫ್ತಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.
ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆ ಫಲಿತಾಂಶದ ಕುರಿತು ಶ್ರೀನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಅಧ್ಯಕ್ಷ ಮುಫ್ತಿ, ನಾನು ಎಲ್ಲಾ ಬಿಜೆಪಿ ಮುಖಂಡರಿಗೆ ಒಂದು ವಿಷಯದ ಕುರಿತು ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನೊಂದಿಗೆ ನೀವು ರಾಜಕೀಯವಾಗಿ ಹೋರಾಟ ನಡೆಸಿ. ಎನ್ಐಎ, ಇಡಿ ಮತ್ತು ಸಿಬಿಐ ಮುಂದೆ ಬಿಟ್ಟು ರಾಜಕೀಯ ಮಾಡಬೇಡಿ. ಪ್ರಜಾಪ್ರಭುತ್ವವು ಮೂಲ ಹಕ್ಕುಗಳ ಕುರಿತಾಗಿದೆ. ನೀವು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ತನಿಖೆಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ನನ್ನ ಕುಟುಂಬವನ್ನು ಭಯಭೀತಗೊಳಿಸುತ್ತಿದೆ. ನೀವು ನನ್ನ ರಾಜಕೀಯದ ವಿರುದ್ಧ ಹೋರಾಟ ನಡೆಸಬೇಕು. ಕುಟುಂಬ, ಸ್ನೇಹಿತರು ಪಕ್ಷದ ಸಹೋದ್ಯೋಗಿಗಳನ್ನು ಇದಕ್ಕೆ ಸೇರಿಸಬಾರದು ಎಂದು ತಿಳಿಸಿದ್ದಾರೆ.