ನವದೆಹಲಿ:ಬ್ರಾಹ್ಮಣ ಪಂಡಿತರ ಹತ್ಯಾಕಾಂಡದ ಬಗ್ಗೆ ಹೇಳುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಟೀಕಿಸಿದ ಬೆನ್ನಲ್ಲೇ ಇದೀಗ ಇನ್ನೊಬ್ಬ ಮಾಜಿ ಸಿಎಂ, ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಖಂಡಿಸಿದ್ದಾರೆ. ಬಿಜೆಪಿ ಧರ್ಮದ ಆಧಾರದ ಮೇಲೆ ಜನರನ್ನು ಇಬ್ಭಾಗ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಮತ್ತು ಕೇಂದ್ರ ಸರ್ಕಾರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಲು ಹೇಳುತ್ತಿರುವುದರ ವಿರುದ್ಧ ವಾಗ್ದಾಳಿ ನಡೆಸಿದ ಮುಫ್ತಿ, ನಿಮ್ಮ 8 ವರ್ಷದ ಅಧಿಕಾರವಧಿಯಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲರೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಬಿಜೆಪಿ ಮತ್ತು ಪ್ರಧಾನಿ ಕೇಂದ್ರ ಸರ್ಕಾರ ಸಿನಿಮಾದ ಪ್ರಚಾರ ಮಾಡುತ್ತಿದೆ. ಈ ರೀತಿ ಮಾಡುವ ಬದಲಾಗಿ ಅವರು ಕಳೆದ 8 ವರ್ಷಗಳಲ್ಲಿ ಕಾಶ್ಮೀರಿ ಪಂಡಿತರಿಗಾಗಿ ಏನಾದರೂ ಮಾಡಿದ್ದರೆ, ಅವರ ಪರಿಸ್ಥಿತಿ ಇಂದು ಭಿನ್ನವಾಗಿರುತ್ತಿತ್ತು. ಕಾಶ್ಮೀರಿ ಹಿಂದೂಗಳ ಹತ್ಯೆ ಕುರಿತಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನಿಟ್ಟುಕೊಂಡು ಧರ್ಮದ ಆಧಾರದ ಮೇಲೆ ಜನರನ್ನು ಪ್ರಚೋದಿಸಲು ಬಿಜೆಪಿ ಮುಂದಾಗಿದೆ. ಇದರ ಬದಲು ಸತ್ಯ ಅರಿಯಲು ಸಮಿತಿಯನ್ನು ರಚಿಸುವಂತೆ ಪಿಡಿಪಿ ಮುಖ್ಯಸ್ಥೆ ಕೋರಿದ್ದಾರೆ.