ಶಿಲ್ಲಾಂಗ್ (ಮೇಘಾಲಯ):ಇವಿಎಂ(ವಿದ್ಯುನ್ಮಾನ ಮತಯಂತ್ರ)ನಲ್ಲಿರುವ ಯಾವುದೇ ಬಟನ್ ಒತ್ತಿದರೆ ಅದು ಬಿಜೆಪಿ ಪರವಾಗಿ ಮತ ಹಾಕುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಶೇರ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಒ) ಎಫ್.ಆರ್.ಖಾರ್ಕೊಂಗೊರ್ ಶನಿವಾರ ಹೇಳಿದ್ದಾರೆ. ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ಬೊಲೊಂಗ್ ಆರ್.ಸಂಗ್ಮಾ ಬಂಧಿತ ಆರೋಪಿ. ಈತ ಫೆ.16ರಂದು ಇವಿಎಂಗಳನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದ.
ರೊಂಗ್ಜೆಂಗ್ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಪೊಲೀಸರಿಗೆ ದೂರು ನೀಡಿದ ನಂತರ ಸಂಗ್ಮಾ ಅವರನ್ನು ಬಂಧಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಸುಳ್ಳು ಹೇಳಿಕೆಯೊಂದಿಗೆ ವ್ಯವಹರಿಸುವ ಐಪಿಸಿ ಸೆಕ್ಷನ್ 171 ಜಿ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಖಾರ್ಕೊಂಗೊರ್ ತಿಳಿಸಿದ್ದಾರೆ. ವಿಎಂಗಳು ಅಥವಾ ವಿದ್ಯುನ್ಮಾನ ಮತಯಂತ್ರಗಳು ಟ್ಯಾಂಪರ್-ಪ್ರೂಫ್ ಆಗಿರುತ್ತವೆ ಮತ್ತು ಯಾವುದೇ ಕುಶಲತೆಯನ್ನು ಪ್ರಯತ್ನಿಸಿದರೆ ಫ್ಯಾಕ್ಟರಿ ರೀಸೆಟ್ ಮೋಡ್‌ಗೆ ಹೋಗುತ್ತವೆ. ಪ್ರತಿ ಹಂತದಲ್ಲೂ ಹಲವು ರಕ್ಷಣಾತ್ಮಕ ಕ್ರಮಗಳಿರುತ್ತವೆ ಎಂದು ಅವರು ಸ್ಪಷ್ಟಪಡಿಸಿದರು.
ಈಶಾನ್ಯದಲ್ಲಿ ಚುನಾವಣೆ ಭರಾಟೆ:ಫೆ.16ರಂದು ತ್ರಿಪುರಾದಲ್ಲಿ ವಿಧಾನಸಭೆ ಚುನಾವಣೆ ನಡೆದಿದೆ. ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳೂ ಸೇರಿದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಸ್ಪರ್ಧಿಸಿದ್ದವು. ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು 6 ಸ್ಥಾನಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟು ಕೊಟ್ಟಿದೆ. ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳ ಜತೆ ಮೈತ್ರಿ ಮಾಡಿಕೊಂಡಿದ್ದು 13 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಎಡ ಪಕ್ಷಗಳಾದ ಸಿಪಿಐ, ಫಾರ್ವರ್ಡ್ ಬ್ಲಾಕ್, ಸಿಪಿಐ(ಎಂ), ಆರ್‌ಎಸ್‌ಪಿ ಪಕ್ಷ 47 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿವೆ. ಸ್ಥಳೀಯ ಪಕ್ಷ ತ್ರಿಪುರಾ ಮೋರ್ಚಾ 42 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಮಾರ್ಚ್ 2ರಂದು ಮತಎಣಿಕೆ ನಡೆಯಲಿದೆ. 30 ವರ್ಷಗಳಿಗೂ ಹೆಚ್ಚು ಕಾಲ ತ್ರಿಪುರಾದಲ್ಲಿ ಸಿಪಿಎಂ ಆಡಳಿತವಿತ್ತು. 2018ರಲ್ಲಿ ರಾಜ್ಯದಲ್ಲಿ ಯಾವುದೇ ಅಸ್ತಿತ್ವ ಹೊಂದಿರದ ಬಿಜೆಪಿ 60 ಸ್ಥಾನಗಳಲ್ಲಿ 36 ಸ್ಥಾನ ಗೆದ್ದು ಇತಿಹಾಸ ಬರೆದಿತ್ತು. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆ.27 ರಂದು ಚುನಾವಣೆ ನಡೆಯಲಿದೆ.
ಇದನ್ನೂ ಓದಿ:ತ್ರಿಪುರಾ ವಿಧಾನಸಭೆ ಚುನಾವಣೆ 2023: ಮತದಾನ ಆರಂಭ, 259 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ