ಶಿಲ್ಲಾಂಗ್(ಮೇಘಾಲಯ): ಪ್ರವಾಸೋದ್ಯಮ ಹಾಗೂ ಬಾಂಗ್ಲಾ ದೇಶದೊಂದಿಗಿನ ವ್ಯಾಪಾರ ವಹಿವಾಟಿಗೆ ಉತ್ತೇಜನ ನೀಡುವ ದೃಷ್ಠಿಯಿಂದ ವಹ್ರೂ ನದಿಯ ತಟದಲ್ಲಿ ನಿರ್ಮಿಸಲಾಗಿರುವ ದೇಶದ ಅತಿ ದೊಡ್ಡ ಉಕ್ಕಿನ ಸೇತುವೆಯನ್ನು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಶುಕ್ರವಾರ ಉದ್ಘಾಟಿಸಿದರು.
ಬಾಂಗ್ಲಾದೇಶದ ಗಡಿಯಲ್ಲಿ ನಿರ್ಮಿಸಲಾಗಿರುವ ಈ ಸೇತುವೆ, ಭೋಲಗಂಜ್ ಮತ್ತು ಸಾಬಾರ್ ನಡುವೆ ಸಂಪರ್ಕ ಕಲ್ಪಿಸುವ ಸುಗಮ ಹಾದಿಯಾಗಿದೆ. ಈ ಸೇತುವೆ 169.350 ಮೀಟರ್ ಉದ್ದವಿದೆ. ಕೇಂದ್ರ ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯ ಸೇತುವೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದ್ದು, 49.395 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.
ಸೇತುವೆ ಉದ್ಘಾಟಿಸಿ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಂಗ್ಮಾ, ಇದು ನಮ್ಮ ದೇಶದ ಅತ್ಯಂತ ಉದ್ದದ ಉಕ್ಕಿನ ಸೇತುವೆಯಾಗಿದೆ. ಇದು ಭೋಲಗಂಜ್ ಮತ್ತು ಸಾಬಾರ್ ಪ್ರದೇಶವನ್ನು ವಾಹ್ರೂ ನದಿಯ ಮೇಲಿರುವ ನೊಂಗಿರಿ ಜೊತೆ ಸಂಪರ್ಕಿಸಲು ಅತ್ಯಂತ ಅನುಕೂಲಕಾರಿಯಾಗಿದೆ. ಈ ಸೇತುವೆ ಮೇಘಾಲಯದ ಜನರ ಬಹು ದಿನದ ಕನಸಾಗಿತ್ತು ಎಂದು ಬಣ್ಣಿಸಿದರು.
ಈ ಸೇತುವೆ ನಿರ್ಮಾಣದಿಂದಾಗಿ ರಾಜ್ಯದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದಲ್ಲದೆ, ಬಾಂಗ್ಲಾದೇಶದೊಂದಿಗೆ ವ್ಯಾಪಾರ ವಹಿವಾಟು ನಡೆಸಲೂ ಸಹ ಅನುಕೂಲವಾಗಲಿದೆ.
ಸೇತುವೆ ಉದ್ಘಾಟನೆ ಕಾರ್ಯಕ್ರಮದ ವೇಳೆ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸೊಂಗ್, ಸ್ಪೀಕರ್ ಮೆಟ್ಬಾ ಲಿಂಗ್ಡೊ, ಸ್ಥಳೀಯ ಶಾಸಕ ಬಾಲಾಜೀದ್ ಸಿನ್ರೆಮ್ ಮತ್ತು ಸರ್ಕಾರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.