ಪಾಟ್ನಾ (ಬಿಹಾರ): ಜೂನ್ 23ರಂದು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಬೃಹತ್ ಸಭೆ ನಡೆಯಲಿದೆ. ಇದಕ್ಕೆ ಮುಂಚಿತವಾಗಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಸಭೆಯಲ್ಲಿ ಎಲ್ಲ ನಾಯಕರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ, ತಮ್ಮ ಪ್ರತಿನಿಧಿಗಳನ್ನು ಕಳುಹಿಸದಂತೆ ತಿಳಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, 15 ವಿರೋಧ ಪಕ್ಷಗಳು ಸಭೆಯಲ್ಲಿ ಭಾಗವಹಿಸುವುದನ್ನು ಖಚಿತಪಡಿಸಿವೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೊರತುಪಡಿಸಿ ಉಳಿದೆಲ್ಲ ನಾಯಕರು ಬರುತ್ತಿದ್ದಾರೆ ಎಂದು ಹೇಳಿದರು.
ವಿಪಕ್ಷಗಳ ಸಭೆಯಲ್ಲಿ ಭಾಗವಹಿಸುವ ನಾಯಕರು:ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಹೇಮಂತ್ ಸೋರೆನ್, ಉದ್ಧವ್ ಠಾಕ್ರೆ, ಶರದ್ ಪವಾರ್, ಎಂ.ಕೆ. ಸ್ಟಾಲಿನ್, ಅರವಿಂದ್ ಕೇಜ್ರಿವಾಲ್, ಡಿ.ರಾಜಾ, ಸೀತಾರಾಮ್ ಯೆಚೂರಿ ಮತ್ತು ದೀಪಂಕರ್ ಭಟ್ಟಾಚಾರ್ಯ ಸೇರಿದಂತೆ ಇನ್ನುಳಿದ ವಿವಿಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಣಿಯಲು ಭಾರಿ ಪ್ಲ್ಯಾನ್: 2024ರ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಪಕ್ಷಗಳನ್ನು ಸಜ್ಜುಗೊಳಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ತಮ್ಮ ಭಾಗವಹಿಸುವಿಕೆಯ ಕುರಿತು ಪ್ರತಿಕ್ರಿಯಿಸಿದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು, ''ನಿತೀಶ್ ಕುಮಾರ್ ಅವರು ತಮ್ಮನ್ನು ಕರೆದು ಆಹ್ವಾನ ನೀಡಿದ್ದಾರೆ. ಅವರು ದೇಶದ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದ್ದಾರೆ. ನಾನು ಅಲ್ಲಿಗೆ ಹೋಗುತ್ತೇನೆ. ಅವರು ರಾಷ್ಟ್ರೀಯ ಸಮಸ್ಯೆಯೊಂದರಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಆಹ್ವಾನವನ್ನು ನೀಡಿದ್ದಾರೆ" ಎಂದು ಹೇಳಿದರು.