ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಇದೇ ವಾರ ಅಮೆರಿಕಕ್ಕೆ ಪ್ರವಾಸ ಕೈಗೊಳ್ಳಲಿದ್ದು, ಉನ್ನತ ಮಟ್ಟದ ಸಭೆಗಳನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 22 ರಂದು ವಾಷಿಂಗ್ಟನ್ ಡಿಸಿಗೆ ತೆರಳಲಿರುವ ಮೋದಿ ಸೆ.23ರಂದು ಬೆಳಿಗ್ಗೆ ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒಗಳನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಜೊತೆಗೆ ಸಹ ಮೋದಿ ಸಭೆ ನಡೆಸಲಿದ್ದಾರೆ. ಆದರೆ, ಅವರ ಭೇಟಿಯ ವಿವರಗಳು ಇನ್ನೂ ದೃಢಪಟ್ಟಿಲ್ಲ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ.
ಕಮಲಾ ಹ್ಯಾರಿಸ್ ಭೇಟಿ ನಿರೀಕ್ಷೆ
ಇನ್ನು ಅಮೆರಿಕದ ಉನ್ನತ ಉದ್ಯಮಿಗಳ ಜೊತೆಗಿನ ಭೇಟಿಯ ನಂತರ, ಪಿಎಂ ಮೋದಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ. ಭಾರತೀಯ ಮೂಲದ ಮಹಿಳೆ ಅಮೆರಿಕದಲ್ಲಿ ಮೊದಲ ಬಾರಿಗೆ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜೊತೆ ಮಾತುಕತೆ ನಡೆಸಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.
ಮೊದಲ ಬೌತಿಕ ಸಭೆಯಲ್ಲಿ ಮೋದಿ ಭಾಗಿ
ಪಿಎಂ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರೊಂದಿಗೆ ಮೊದಲ ಭೌತಿಕ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಸೆಪ್ಟೆಂಬರ್ 24 ರಂದು ವಾಷಿಂಗ್ಟನ್‌ನಲ್ಲಿ ನಡೆಯುವ ಮೊದಲ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಅದೇ ದಿನ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಜಪಾನ್ ಕೌಂಟರ್ ಯೋಶಿಹೈಡ್ ಸುಗಾ ಅವರನ್ನು ಕೂಡ ಪ್ರಧಾನಿ ಭೇಟಿ ಮಾಡಲಿದ್ದಾರೆ.
ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಭೋಜನವನ್ನು ಸಹ ಆಯೋಜಿಸಲಾಗಿದೆ. ಇನ್ನು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿ ವಾಷಿಂಗ್ಟನ್ಗೆ ಭೇಟಿ ನೀಡುವ ಸಾಧ್ಯತೆಯಿದೆ. ಸೆಪ್ಟೆಂಬರ್ 24 ರಂದು ಸಂಜೆ ಪ್ರಧಾನಿ ಮೋದಿ ನ್ಯೂಯಾರ್ಕ್‌ಗೆ ತೆರಳಲಿದ್ದು, ಮರುದಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.