ನವದೆಹಲಿ:ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಸಂಬಂಧ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಪಕ್ಷಗಳ ಮಹತ್ವದ ಸಭೆ ಕರೆದಿದ್ದು, ಕಾನ್ಸ್‌ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾದಲ್ಲಿ 17 ಪಕ್ಷಗಳ ಮುಖಂಡರು ಸೇರಿದ್ದಾರೆ.
ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಪ್ರತಿಪಕ್ಷಗಳಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಮತಾ ಬ್ಯಾನರ್ಜಿ ವಿವಿಧ ಪಕ್ಷಗಳೊಂದಿಗೆ ಚರ್ಚಿಸುತ್ತಿದ್ದಾರೆ. ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್ಸಿಪಿ ವರಿಷ್ಠ ಶರದ್ ಪವಾರ್, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಷ್ ಯಾದವ್ ಪಾಲ್ಗೊಂಡಿದ್ದಾರೆ.
ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಜೈರಾಂ ರಮೇಶ್, ಆರ್ಜೆಡಿ ಪ್ರತಿನಿಧಿಗಳಾಗಿ ಮನೋಜ್ ಝಾ, ಎ.ಡಿ.ಸಿಂಗ್, ಶಿವಸೇನೆ ಪ್ರತಿನಿಧಿಗಳಾಗಿ ಪ್ರಿಯಾಂಕಾ ಚತುರ್ವೇದಿ, ಸುಭಾಷ್ ದೇಸಾಯಿ ಮತ್ತು ಡಿಎಂಕೆಯಿಂದ ಟಿ.ಆರ್.ಬಾಲು ಹಾಗೂ ಹಿರಿಯ ನಾಯಕರಾದ ಯಶ್ವಂತ್ ಸಿನ್ಹಾ, ಪ್ರಫುಲ್ ಪಟೇಲ್ ಸೇರಿದಂತೆ ಅನೇಕ ಮುಖಂಡರಿದ್ದಾರೆ.
ಓವೈಸಿಗಿಲ್ಲ ಆಹ್ವಾನ: ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಈ ಸಭೆಗೆ ಆಹ್ವಾನ ನೀಡಿಲ್ಲ. ಈ ಬಗ್ಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಓವೈಸಿ, "ನನಗೆ ಆಹ್ವಾನ ಕೊಟ್ಟಿಲ್ಲ. ಒಂದು ವೇಳೆ ನನಗೆ ಆಹ್ವಾನ ನೀಡಿದ್ದರೂ ನಾನು ಸಭೆಗೆ ಹೋಗುತ್ತಿರಲಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಟಿಎಂಸಿಯವರು ನಮ್ಮ ಬಗ್ಗೆ ಕೆಟ್ಟದ್ದಾಗಿ ಮಾತನಾಡುತ್ತಾರೆ. ಆದಾಗ್ಯೂ, ನಮ್ಮನ್ನು ಕರೆದಿದ್ದರೂ ನಾವು ಹೋಗುತ್ತಿರಲ್ಲ. ಯಾಕೆಂದರೆ, ಅವರು ಕಾಂಗ್ರೆಸ್ಗೆ ಆಹ್ವಾನ ನೀಡಿದ್ದಾರೆ" ಎಂದು ಕುಟುಕಿದ್ದಾರೆ.