ಕರ್ನಾಟಕ

karnataka

ETV Bharat / bharat

ಮೋದಿ ಸರ್ಕಾರಕ್ಕೆ ಠಕ್ಕರ್ ಕೊಡಲು ವಿಪಕ್ಷಗಳು ಸಜ್ಜು.. ಪ್ರತಿಪಕ್ಷಗಳಿಗೆ ಸೋನಿಯಾ ಕೊಟ್ಟ ಸಲಹೆಗಳೇನು? - PM Modi

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಮಣಿಸಲು ಹಾಗೂ ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಇಂದು ಸೋನಿಯಾಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ಸಭೆ ನಡೆಸುತ್ತಿದ್ದಾರೆ.

ಸೋನಿಯಾ
ಸೋನಿಯಾ

By

Published : Aug 20, 2021, 5:21 PM IST

Updated : Aug 20, 2021, 8:34 PM IST

ನವದೆಹಲಿ: 2024ರ ಲೋಕಸಭಾ ಚುನಾವಣೆ ಹಿನ್ನೆಲೆ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಇಂದು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾಗಾಂಧಿ ವಿಪಕ್ಷಗಳ ನಾಯಕರೊಂದಿಗೆ ಸಭೆ ನಡೆಸಿದ್ದಾರೆ.

ಸಭೆಯಲ್ಲಿ, 2024 ರ ಲೋಕಸಭಾ ಚುನಾವಣೆಗೆ ವ್ಯವಸ್ಥಿತವಾಗಿ ಯೋಜಿಸಿ ಒಗ್ಗಟ್ಟಿನಿಂದ ಕೆಲಸ ಮಾಡಲು ಎಲ್ಲ ರೀತಿಯ ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗಬೇಕು ಎಂದು ಸೋನಿಯಾ ಗಾಂಧಿ ವಿಪಕ್ಷಗಳಿಗೆ ಕರೆ ನೀಡಿದ್ದಾರೆ.

ಸದ್ಯ ನಮ್ಮೆದುರಿಗೆ ಬೇರೆ ಯಾವುದೇ ಆಯ್ಕೆ ಇಲ್ಲ. ಪ್ರಸ್ತುತ ದಿನಗಳಲ್ಲಿ ನಮ್ಮ ಹಿತಾಸಕ್ತಿಗಳಿಗಿಂತ ರಾಷ್ಟ್ರದ ಹಿತಾಸಕ್ತಿಗಳು ಬಹಳ ಮುಖ್ಯ. 2024 ರ ಚುನಾವಣೆ ನಮ್ಮ ಅಂತಿಮ ಗುರಿಯಾಗಿದೆ. ನಮಗೆ ಬೇರೆ ಯಾವುದೇ ಪರ್ಯಾಯ ಮಾರ್ಗವಿಲ್ಲದ ಕಾರಣ ವಿಪಕ್ಷಗಳೆಲ್ಲ ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಬೇಕಿದೆ ಎಂದು ಸೋನಿಯಾಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಏಕ ಮನಸ್ಸಿನ ಹೋರಾಟದಿಂದ ಮಾತ್ರ ಸಾಧ್ಯ

ಸ್ವಾತಂತ್ರ್ಯ ಚಳವಳಿಯ ಮೌಲ್ಯಗಳು ಮತ್ತು ನಮ್ಮ ಸಂವಿಧಾನದ ತತ್ವಗಳು ಮತ್ತು ನಿಬಂಧನೆಗಳಲ್ಲಿ ನಂಬಿಕೆ ಹೊಂದಿರುವ ಸರ್ಕಾರವನ್ನು ನಮ್ಮ ದೇಶಕ್ಕೆ ನೀಡುವ ಏಕ ಮನಸ್ಸಿನ ಉದ್ದೇಶದಿಂದ ಯೋಜನೆಯನ್ನು ರೂಪಿಸಲು ಅವರು ವಿಪಕ್ಷಗಳನ್ನು ಕೋರಿದರು.

ಸಭೆಯಲ್ಲಿ, ಎನ್‌ಸಿಯ ಫಾರೂಕ್ ಅಬ್ದುಲ್ಲಾ, ಡಿಎಂಕೆಯ ಎಂ.ಕೆ. ಸ್ಟಾಲಿನ್, ಟಿಎಂಸಿಯ ಮಮತಾ ಬ್ಯಾನರ್ಜಿ, ಜೆಎಂಎಂನ ಹೇಮಂತ್ ಸೊರೆನ್, ಶಿವಸೇನೆಯ ಉದ್ಧವ್ ಠಾಕ್ರೆ, ಎನ್‌ಸಿಪಿಯ ಶರದ್ ಪವಾರ್, ಎಲ್​ಜೆಡಿಯ ಶರದ್ ಯಾದವ್ ಮತ್ತು ಸಿಪಿಎಂನ ಸೀತಾರಾಮ್ ಯೆಚೂರಿ ಭಾಗಿಯಾಗಿದ್ದರು.

ಮಾಯಾವತಿ, ಕೇಜ್ರಿವಾಲ್​​ ಅಖಿಲೇಶ್​​ಗೆ ಆಹ್ವಾನ ಇರಲಿಲ್ಲ

ಸಭೆಗೆ ಬಿಎಸ್​ಪಿ ನಾಯಕಿ ಮಾಯಾವತಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಮಾಜವಾಗಿ ಪಕ್ಷದ ಮುಖ್ಯಸ್ಥ ಅಖಿಲೇಶ್​ರನ್ನು ಆಹ್ವಾನಿಸಿರಲಿಲ್ಲ. ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸಬೇಕು. ಪೆಗಾಸಸ್​ ಹಗರಣ, ತೈಲ ಬೆಲೆ ಏರಿಕೆ, ಮೂರು ಕೃಷಿ ಕಾನೂನುಗಳ ವಿರುದ್ಧ ನಿರಂತರ ದನಿ ಎತ್ತಬೇಕು ಎಂದು ವಿಪಕ್ಷಗಳಿಗೆ ಸೋನಿಯಾ ಕರೆ ನೀಡಿದರು.

ಈ ಬಾರಿಯ ಅಧಿವೇಶನದಂತೆ, ಮುಂದಿನ ಅಧಿವೇಶನದಲ್ಲೂ ಸರ್ಕಾರದ ವಿರುದ್ಧ ಎಲ್ಲ ವಿಪಕ್ಷಗಳು ದನಿ ಎತ್ತಬೇಕು. ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸಬೇಕು. ಇದರ ಜತೆಗೆ 2024 ರ ಚುನಾವಣೆಗೂ ತಯಾರಿ ನಡೆಸಬೇಕು ಎಂದರು.

ಇದನ್ನೂ ಓದಿ: ರೈತನ ಮಗನಾಗಿ ತುಂಬಿದ ಜಲಾಶಯ ಕಣ್ತುಂಬಿಕೊಳ್ಳುವುದು ಸಂತಸದ ಸಂಗತಿ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಕೆಲ ದಿನಗಳ ಹಿಂದೆ ಟಿಎಂಸಿ ಮಮತಾ ಬ್ಯಾನರ್ಜಿ, ದೆಹಲಿಗೆ ತೆರಳಿ ಪ್ರತಿಪಕ್ಷಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದರು. ಬಳಿಕ ರಾಹುಲ್ ಗಾಂಧಿ ನೇತೃತ್ವದಲ್ಲಿ ವಿಪಕ್ಷಗಳ ನಾಯಕರು ಚಹಾಕೂಟದಲ್ಲಿ ಭಾಗಿಯಾಗಿದ್ದರು. ಈ ಬೆನ್ನಲ್ಲೇ ಇಂದು ಸೋನಿಯಾಗಾಂಧಿ ನೇತೃತ್ವದಲ್ಲಿ ಸಭೆ ನಡೆಸುತ್ತಿರೋದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Last Updated : Aug 20, 2021, 8:34 PM IST

ABOUT THE AUTHOR

...view details