ನವದೆಹಲಿ: ಕೇಂದ್ರ ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಮುಂದುವರೆಯಲಿದೆ. ಇದೇ ವಿಚಾರವಾಗಿ ಇಂದು ರೈತ ಸಂಘಟನೆಗಳು ಹಾಗೂ ಕೇಂದ್ರದ ನಡುವೆ ನಡೆದ ಏಳನೇ ಸುತ್ತಿನ ಮಾತುಕತೆ ಯಾವುದೇ ಅಂತಿಮ ನಿರ್ಧಾರವಿಲ್ಲದೆ ಮುಕ್ತಾಯಗೊಂಡಿದೆ. ಹೀಗಾಗಿ ಜನವರಿ 8ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ದೆಹಲಿಯ ವಿಜ್ಞಾನ ಭವನದಲ್ಲಿ 41 ವಿವಿಧ ರೈತ ಪರ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ನಡುವೆ ಮಾತುಕತೆ ನಡೆಯಿತು. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಪಿಯೂಷ್ ಗೋಯಲ್ ಇದರಲ್ಲಿ ಭಾಗಿಯಾಗಿದ್ದರು.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ, ಈ ಕಾಯ್ದೆಗಳ ಕುರಿತು ರೈತರಲ್ಲಿರುವ ಗೊಂದಲವನ್ನು ನಿವಾರಿಸುವ ಭರವಸೆ ವ್ಯಕ್ತಪಡಿಸಿದೆ. ಹೀಗಾಗಿ ಮತ್ತೊಂದು ಸುತ್ತಿನ ಮಾತುಕತೆ ಜನವರಿ 8ರಂದು ನಡೆಯಲಿದೆ. ಸಭೆ ಮುಕ್ತಾಯಗೊಂಡ ಬಳಿಕ ಮಾತನಾಡಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಇಂದಿನ ಚರ್ಚೆ ನೋಡಿದರೆ ನಮ್ಮ ಮುಂದಿನ ಸಭೆಯಲ್ಲಿ ಅರ್ಥಪೂರ್ಣ ಚರ್ಚೆ ನಡೆಸುತ್ತೇವೆ. ಜತೆಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇನ್ನು ಕೃಷಿ ಕಾಯ್ದೆ ಹಿಂಪಡೆದುಕೊಳ್ಳುವಂತೆ ರೈತ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ತಿಳಿದು ಬಂದಿದ್ದು, ಈ ಕಾಯ್ದೆಗಳನ್ನು ಹಿಂಪಡೆಯುವವರೆಗೂ ತಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿವೆ.
ಈಗಾಗಲೇ ರೈತ ಸಂಘಟನೆಗಳ ಪ್ರತಿನಿಧಿಗಳು ಮತ್ತು ಸರ್ಕಾರದ ನಡುವೆ 6 ಸಭೆಗಳಾಗಿದ್ದು, 6 ಸಭೆಗಳೂ ವಿಫಲವಾಗಿವೆ. ಇಂದು ನಡೆದ ಇಂದು 7ನೇ ಸುತ್ತಿನ ಸಭೆಯಲ್ಲೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನು ಕಳೆದ ನವೆಂಬರ್ 26ರಿಂದ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 42ನೇ ದಿನಕ್ಕೆ ಕಾಲಿಟ್ಟಿದೆ.