ನವದೆಹಲಿ: ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ ಅವರು ಇಡೀ ಜಗತ್ತಿಗೆ ಗೊತ್ತು. ಉದ್ಯಮ, ಶ್ರೀಮಂತಿಕೆ ಹಾಗೂ ಉದಾರ ದಾನದ ಪ್ರವೃತಿ ಅವರಿಗೆ ದೊಡ್ಡ ಹೆಸರನ್ನು ತಂದುಕೊಟ್ಟಿದೆ. ಆದರೆ, ಅವರ ಕಿರಿಯ ಸಹೋದರ ಜಿಮ್ಮಿ ನೇವಲ್ ಟಾಟಾ ಬಗ್ಗೆ ಹೊರ ಜಗತ್ತಿನ ಯಾರಿಗೂ ಹೆಚ್ಚು ತಿಳಿದಿರುವುದಿಲ್ಲ. ಯಾಕೆಂದರೆ, ಅವರು ಜನಮನದಿಂದ ದೂರವೇ ಇದ್ದು ಅತ್ಯಂತ ಸರಳ ಜೀವನ ನಡೆಸುತ್ತಿದ್ದಾರೆ.
ಖ್ಯಾತ ಉದ್ಯಮಿಯಾಗಿರುವ ರತನ್ ಟಾಟಾ ವಿವಾಹವಾಗಿಲ್ಲ. ತಮ್ಮ ಒಡಹುಟ್ಟಿದವರು ಮತ್ತು ವಿಶೇಷವಾಗಿ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ. ಇತ್ತೀಚೆಗೆ ರತನ್ ಟಾಟಾ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಕಪ್ಪು ಬಿಳುಪಿನ ಫೋಟೋ ಹಂಚಿಕೊಂಡಿದ್ದರು. ಆ ಫೋಟೋ ತೆಗೆದಿದ್ದು ಸುಮಾರು 78 ವರ್ಷಗಳ ಹಿಂದೆ. ಅಂದರೆ 1945ರ ದಶಕದಲ್ಲಿ. ರತನ್ ಮತ್ತು ಜಿಮ್ಮಿ ಟಾಟಾ ಇಬ್ಬರೂ ತಮ್ಮ ಸಾಕು ನಾಯಿಯನ್ನು ಸೈಕಲ್ ಮೇಲೆ ಕೂರಿಸಿಕೊಂಡಿದ್ದ ಕ್ಷಣವನ್ನು ಆ ಫೋಟೋದಲ್ಲಿ ಸೆರೆ ಹಿಡಿಯಲಾಗಿತ್ತು.
ರತನ್ ಟಾಟಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಳ್ಳುವಾಗ ರತನ್ ಟಾಟಾ ಆಕರ್ಷಕವಾದ ಶೀರ್ಷಿಕೆಯನ್ನು ಬರೆದುಕೊಂಡಿದ್ದರು. ''ಖುಷಿಯ ದಿನಗಳು. ನಮ್ಮ ನಡುವೆ ಯಾವುದೂ ಬರಲಿಲ್ಲ... (1945 ನನ್ನ ಸಹೋದರ ಜಿಮ್ಮಿ ಜೊತೆ)'' ಎಂದು ಪೋಸ್ಟ್ ಮಾಡಿದ್ದರು. ಇದು ಸಾಮಾಜಿಕ ಜಾಲತಾಣ ಬಳಕೆದಾರರ ಸಾಕಷ್ಟು ಗಮನ ಸೆಳೆದಿತ್ತು. ಅದ್ಭುತವಾದ ಚಿತ್ರ ಹಾಗೂ ನೀವು ನಮಗೆಲ್ಲ ಸ್ಫೂರ್ತಿ ಎಂದು ಅನೇಕರು ಕಾಮೆಂಟ್ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದರು.
ಹಾಗಾದರೆ ಜಿಮ್ಮಿ ಟಾಟಾ ಎಲ್ಲಿದ್ದಾರೆ?: ಜಿಮ್ಮಿ ನೇವಲ್ ಟಾಟಾ ತಮ್ಮ ಹಿರಿಯ ಸಹೋದರ ರತನ್ ಟಾಟಾ ಅವರಂತಲ್ಲ. ತಮ್ಮದು ಭಾರತದ ಅತಿದೊಡ್ಡ ವ್ಯಾಪಾರ ಕುಟುಂಬವಾಗಿದ್ದರೂ ಜಿಮ್ಮಿ ಟಾಟಾ ಸರಳ ಜೀವನ ನಡೆಸುತ್ತಿದ್ದಾರೆ. ಜನರಿಂದ ತುಂಬಾ ದೂರು ಇದ್ದು, ಸಾಮಾಜಿಕ ಮಾಧ್ಯಮಗಳನ್ನೂ ಬಳಕೆ ಮಾಡಲ್ಲ. ರತನ್ ಟಾಟಾ ಅವರು ಕುಟುಂಬದ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನಿರ್ಧರಿಸಿದರೆ, ಜಿಮ್ಮಿ ಟಾಟಾ ಸರಳ ಜೀವನ ಕಂಡುಕೊಂಡಿದ್ದಾರೆ. ದೊಡ್ಡ ಸಂಪತ್ತಿನ ಹೊರತಾಗಿಯೂ ಜಿಮ್ಮಿ ಮುಂಬೈನ ಕೊಲಾಬಾದಲ್ಲಿ 2BHK ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ.
ಉದ್ಯಮಿ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿದ್ದ ಇತ್ತೀಚಿನ ವೈರಲ್ ಪೋಸ್ಟ್ ಪ್ರಕಾರ, ಜಿಮ್ಮಿ ಟಾಟಾ ಸಣ್ಣ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಾರೆ. ಉತ್ತಮ ಸ್ಕ್ವಾಷ್ ಆಟಗಾರರೂ ಆಗಿದ್ದಾರೆ. ಆದರೆ, ಕುಟುಂಬದ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ಹೊಂದಿಲ್ಲ. ಇದಲ್ಲದೆ, ಮತ್ತೊಂದು ವರದಿಗಳ ಪ್ರಕಾರ, ಜಿಮ್ಮಿ ಟಾಟಾ ಅವರ ಬಳಿ ಮೊಬೈಲ್ ಫೋನ್ ಇಲ್ಲ. ಎಲ್ಲ ವಿದ್ಯಮಾನಗಳನ್ನು ಪತ್ರಿಕೆಗಳ ಮೂಲಕವೇ ತಿಳಿದುಕೊಳ್ಳುತ್ತಾರೆ. ಆದಾಗ್ಯೂ, ಅವರು ಇನ್ನೂ ಟಾಟಾ ಸನ್ಸ್, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಟಾಟಾ ಪವರ್, ಇಂಡಿಯನ್ ಹೋಟೆಲ್‌ಗಳು ಮತ್ತು ಟಾಟಾ ಕೆಮಿಕಲ್ಸ್‌ನಲ್ಲಿ ಪ್ರಮುಖ ಷೇರುದಾರರಾಗಿದ್ದಾರೆ. ಟಾಟಾ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಮಾಹಿತಿಯನ್ನು ತಾವಿರುವಲ್ಲೇ ಪಡೆದುಕೊಳ್ಳುತ್ತಾರಂತೆ.
ಇದನ್ನೂ ಓದಿ:ರತನ್ ಟಾಟಾ ಬಯೋಪಿಕ್‌ಗೆ ಸುಧಾ ಕೊಂಗರ ನಿರ್ದೇಶನ?