ಮೀರತ್/ಬಾಗ್ಪತ್ (ಉತ್ತರ ಪ್ರದೇಶ):ದೇಶಾದ್ಯಂತ ಇಂದು ಅದ್ಧೂರಿಯಾಗಿ ವಿಜಯದಶಮಿ ಆಚರಿಸಲಾಯಿತು. ಆದರೆ, ಉತ್ತರಪ್ರದೇಶದ ಎರಡು ಹಳ್ಳಿಗಳಲ್ಲಿ ಮಾತ್ರ ದಸರಾ ಆಚರಣೆ ನಿಷಿದ್ಧವಾಗಿದೆ. ಒಂದು ಗ್ರಾಮಕ್ಕೆ ಪೌರಾಣಿಕ ಕಾರಣವಿದ್ದರೆ, ಇನ್ನೊಂದಕ್ಕೆ ಸ್ವಾತಂತ್ರ್ಯ ಸಂಗ್ರಾಮ ಹೋರಾಟದ ಕರಾಳ ಕತೆಯಿದೆ. ಹೀಗಾಗಿ ಇಲ್ಲಿ ರಾವಣ ದಹನ ನಡೆದೇ ಇಲ್ಲ.
ಸ್ವಾತಂತ್ರ್ಯ ಸಂಗ್ರಾಮದ ಕರಾಳತೆ:ಮೀರತ್ ಜಿಲ್ಲೆಯ ಗಗೋಲ್ ಗ್ರಾಮ. ಇಲ್ಲಿ 166 ವರ್ಷಗಳಿಂದ ಜನರು ದಸರಾ ಹಬ್ಬವನ್ನೇ ಆಚರಿಸಿಲ್ಲ. ಜಿಲ್ಲಾ ಕೇಂದ್ರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಈ ಗ್ರಾಮವು ಮೊದಲ ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರಬಿಂದುವಾಗಿತ್ತು. 1857ರಲ್ಲಿ ಸಿಪಾಯಿ ದಂಗೆ ಎಂದು ಕರೆಯಲ್ಪಡುವ ದೇಶದ ಮೊದಲ ಸ್ವಾತಂತ್ರ್ಯ ಹೋರಾಟವು ಈ ಗ್ರಾಮದಲ್ಲೂ ನಡೆದಿತ್ತು.
ಕ್ರಾಂತಿಕಾರಿಗಳಲ್ಲಿ ಭಯ ಉಂಟು ಮಾಡಲು ಬ್ರಿಟಿಷರು 1857 ರ ಸ್ವಾತಂತ್ರ್ಯ ಹೋರಾಟದ ಒಂಬತ್ತು ವೀರರನ್ನು ಈ ಗ್ರಾಮದ ಕುಖ್ಯಾತ 'ಪೀಪಲ್ ಮರ'ದಲ್ಲಿ ಗಲ್ಲಿಗೇರಿಸಲಾಯಿತು. ಅದೂ ವಿಜಯ ದಶಮಿ (ದಸರಾ) ದಿನದಂದು. ವೀರರ ಪ್ರಾಣತ್ಯಾಗದ ಶೋಕಾಚರಣೆಯ ಕಾರಣದಿಂದಾಗಿ ಅಂದಿನಿಂದ ಈ ಗ್ರಾಮದಲ್ಲಿ ದಸರಾ ಆಚರಣೆಯೇ ನಿಲ್ಲಿಸಲಾಗಿದೆ. ಪ್ರತಿ ವಿಜಯದಶಮಿಯಂದು ಇಲ್ಲಿ ಶೋಕಾಚರಣೆ ಮಾಡಲಾಗುತ್ತದೆ.
ಮೀರತ್‌ನ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ವಿಘ್ನೇಶ್ ತ್ಯಾಗಿ ಹೇಳುವಂತೆ, ಬ್ರಿಟಿಷರು ತಮ್ಮ ನಿರ್ದಯತೆಯನ್ನು ಪ್ರದರ್ಶಿಸಲು ಮತ್ತು ದಂಗೆಯನ್ನು ಮೆಟ್ಟಿ ನಿಲ್ಲಲು 9 ಸ್ವಾತಂತ್ರ್ಯ ಹೋರಾಟಗಾರರನ್ನು ಪೀಪಲ್ ಮರದ ಕೆಳಗೆ ಗಲ್ಲಿಗೇರಿಸಿದರು. ಅಂದು ವಿಜಯ ದಶಮಿ ದಿನವಾಗಿದ್ದು, ಅಂದಿನಿಂದ 166 ವರ್ಷ ಕಳೆದರೂ ಈ ಗ್ರಾಮದ ಜನರು ದಸರಾ ಆಚರಿಸುವುದಿಲ್ಲ ಎಂದರು.
ಪೌರಾಣಿಕ ಕಾರಣ:ಇನ್ನೊಂದು ಗ್ರಾಮವಾದ ಬಾಗ್ಪತ್ ಜಿಲ್ಲೆಯ ಬರಗಾಂವ್ ಕೂಡ ರಾವಣ ದಹನದಿಂದ ವಿಮುಖವಾಗಿದೆ. ಹಿಮಾಲಯದಲ್ಲಿ ತಪಸ್ಸು ಮಾಡಿದ ರಾವಣ, ಶಿವನಿಂದ ಶಕ್ತಿಯನ್ನು ವರಪ್ರಸಾದಿಸಿಕೊಂಡು ಲಂಕಾಗೆ ತೆರಳುವಾಗ, ಈ ಗ್ರಾಮದ ಮೇಲೆ ಹಾದು ಹೋಗಿದ್ದ. ನೈಸರ್ಗಿಕ ಕ್ರಿಯೆಗೆಂದು ತನ್ನಲ್ಲಿನ ಶಕ್ತಿಯನ್ನು ಗ್ರಾಮದ ವ್ಯಕ್ತಿಯೊಬ್ಬರಿಗೆ ನೀಡಿದ್ದ. ಆದರೆ, ಆತ ಶಕ್ತಿಯನ್ನು ತಡೆದುಕೊಳ್ಳದೇ ಭೂಮಿಯ ಮೇಲೆ ಇಟ್ಟಿದ್ದ. ನೆಲ ತಾಕಿದರೆ ಶಕ್ತಿ ಕಳೆದುಹೋಗುತ್ತದೆ ಎಂಬ ವರವಿತ್ತು. ಶಕ್ತಿ ಕಳೆದುಹೋಯಿತು ಎಂಬ ಪ್ರತೀತಿ ಇದೆ. ಹೀಗಾಗಿ ಇಲ್ಲಿ ರಾವಣ ದಹನ ಆಚರಣೆಯನ್ನು ನಿಲ್ಲಿಸಲಾಗಿದೆ.
ಶಕ್ತಿ ನಾಶವಾದ ಜಾಗದಲ್ಲಿ ಈಗ ಮಾತಾ ಮಾನಸ ದೇವಸ್ಥಾನವನ್ನು ಕಟ್ಟಲಾಗಿದೆ. ಇಲ್ಲಿಗೆ ಜನರು ಹಬ್ಬದ ದಿನದಂದು ಬಂದು ಪೂಜೆ ಸಲ್ಲಿಸುತ್ತಾರೆ. ಆದರೆ, ಗ್ರಾಮದ ಜನರು ಮಾತ್ರ ಹಬ್ಬ ಆಚರಣೆ ಮಾಡುವುದಿಲ್ಲ. ರಾವಣ ದಹನ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಮಾತಾ ಮಾನಸ ದೇವಿ ಸಮಿತಿಯ ವ್ಯವಸ್ಥಾಪಕ ರಾಜ್‌ಪಾಲ್ ತ್ಯಾಗಿ ಮಾಹಿತಿ ನೀಡಿದರು.
ಇದನ್ನೂ ಓದಿ:ಮೈಸೂರು ಜಂಬೂ ಸವಾರಿ ವೈಭವ: ಫೋಟೋಗಳಲ್ಲಿ ನೋಡಿ..