ಮೀರತ್, ಉತ್ತರಪ್ರದೇಶ:ಕ್ರಿಕೆಟ್ ಆಡುತ್ತಿದ್ದ ವೇಳೆ 36 ವರ್ಷದ ಯುವಕನೊಬ್ಬ ಏಕಾಏಕಿ ಕ್ರೀಸ್‌ನಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯುವಕ ಬ್ಯಾಟಿಂಗ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಅವರು 15 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಬ್ಯಾಟಿಂಗ್ ಮಾಡಲು ಬಂದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?:ಭಾನುವಾರ ಮೀರತ್‌ನ ಗಾಂಧಿ ಬಾಗ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಓಲ್ಡ್ ಗನ್ ವರ್ಸಸ್ ಬ್ಲಾಸ್ಟ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಟಾಸ್ ಗೆದ್ದ ಓಲ್ಡ್ ಗನ್ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಇಂದಿರಾನಗರದ ಮಾಧವಪುರಂ ನಿವಾಸಿ ದುಷ್ಯಂತ್ ಶರ್ಮಾ ಓಲ್ಡ್ ಗನ್ ತಂಡ ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದರು. ದುಷ್ಯಂತ್ 4.2 ಓವರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಆಗ ಅವರು ಬ್ಯಾಟಿಂಗ್ ಅನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಿಶ್ರಾಂತಿಗಾಗಿ ಮೈದಾನದಿಂದ ಹೊರ ಬಂದರು. ಸಹ ಆಟಗಾರರು ದುಷ್ಯಂತ್ ಶರ್ಮಾ ಅವರನ್ನು ವೈದ್ಯರ ಬಳಿಗೆ ಹೋಗುವಂತೆ ಕೇಳಿದರು. ಆದರೆ ಅವರು ‘ಬೇಡ, ನಾನು ಚೆನ್ನಾಗಿದ್ದೇನೆ’ ಎಂದು ಹೇಳಿದ್ದರು. ಸುಮಾರು 15 ನಿಮಿಷಗಳ ವಿಶ್ರಾಂತಿಯ ನಂತರ ದುಷ್ಯಂತ್ ಮತ್ತೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಮರಳಿದ್ದರು. ಅವರು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. 7ನೇ ಓವರ್ ಆಡುವಾಗ ಅವರ ಸ್ಥಿತಿ ಹದಗೆಟ್ಟಿದ್ದು, ಇದ್ದಕ್ಕಿದ್ದಂತೆ ಕ್ರೀಸ್‌ನಲ್ಲಿ ಕುಸಿದು ಬಿದ್ದರು.