ನವದೆಹಲಿ/ಕೋಟಾ:ಯುದ್ಧ ಪೀಡಿತ ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ವಿವಿಧ ದೇಶಗಳಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿಸೂಚನೆ ಹೊರಡಿಸಿದ್ದು, ಆ 29 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಭಾರತೀಯ ವಿದ್ಯಾರ್ಥಿಗಳು ಆ ದೇಶವನ್ನು ತೊರೆದು ತವರಿಗೆ ಮರಳಿದ್ದಾರೆ. ಆದರೆ, ಭಾರತಕ್ಕೆ ಹಿಂದಿರುಗಿದ ನಂತರ ವಿದ್ಯಾರ್ಥಿಗಳ ಭವಿಷ್ಯವು ಅತಂತ್ರ ಸ್ಥಿತಿಗೆ ಸಿಲುಕಿದೆ. ಇದೀಗ ಈಗ ಸ್ಟೂಡೆಂಟ್ ಮೊಬಿಲಿಟಿ ಕಾರ್ಯಕ್ರಮದಡಿ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಅಮೆರಿಕ, ಫ್ರಾನ್ಸ್ ಮತ್ತು ಸ್ವೀಡನ್ ಸೇರಿದಂತೆ 29 ದೇಶಗಳಲ್ಲಿ ತಮ್ಮ ಅಧ್ಯಯನ ಮುಂದುವರೆಸಲು ಅನುವು ಮಾಡಿಕೊಡಲಾಗಿದೆ.
ಯಾವ 29 ದೇಶಗಳು?: ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಈಗ ಪೋಲೆಂಡ್, ಆಸ್ಟ್ರಿಯಾ, ಜೆಕ್ ರಿಪಬ್ಲಿಕ್, ಫ್ರಾನ್ಸ್, ಜಾರ್ಜಿಯಾ, ಕಜಕಿಸ್ತಾನ್, ಲಿಥುವೇನಿಯಾ, ಮೊಲ್ಡೊವಾ, ಸ್ಲೊವೇನಿ, ಸ್ಪೇನ್, ಉಜ್ಬೇಕಿಸ್ತಾನ್, ಯುನೈಟೆಡ್ ಸ್ಟೇಟ್ಸ್, ಇಟಲಿ, ಬೆಲ್ಜಿಯಂ, ಈಜಿಪ್ಟ್, ಬೆಲಾರಸ್, ಲಾಟ್ವಿಯಾ, ಕಿರ್ಗಿಸ್ತಾನ್, ಗ್ರೀಸ್, ರೊಮೇನಿಯಾ, ಸ್ವೀಡನ್, ಇಸ್ರೇಲ್, ಇರಾನ್, ಅಜೆರ್ಬೈಜಾನ್, ಬಲ್ಗೇರಿಯಾ, ಜರ್ಮನಿ, ಟರ್ಕಿ, ಕ್ರೊಯೇಷಿಯಾ ಮತ್ತು ಹಂಗೇರಿಯಲ್ಲಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಸೆಪ್ಟೆಂಬರ್ 6ರಂದು ಸ್ಟೂಡೆಂಟ್ ಮೊಬಿಲಿಟಿ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಲಾಗಿತ್ತು. ಆದರೆ, ದೇಶಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.
ಈ ಬಗ್ಗೆ ರಾಜಸ್ಥಾನ ಕೋಟಾದ ಶಿಕ್ಷಣ ತಜ್ಞ ದೇವ್ ಶರ್ಮಾ ಮಾತನಾಡಿ, ಸಾಗರೋತ್ತರ ದೇಶಗಳಲ್ಲಿ ಎಂಬಿಬಿಎಸ್ ಕೋರ್ಸ್‌ಗಳನ್ನು ಮಾಡುವ ವಿದ್ಯಾರ್ಥಿಗಳಿಗೆ ನಮ್ಮ ದೇಶದ ನಿಯಮಗಳು ಕಟ್ಟುನಿಟ್ಟಾಗಿವೆ. ಈ ನಿಯಮಗಳು ಅನ್ವಯ ಸಾಮಾನ್ಯ ಸಂದರ್ಭವಾಗಲಿ ಅಥವಾ ತುರ್ತು ಪರಿಸ್ಥಿತಿಯಲ್ಲೂ ಸಹ ವಿದ್ಯಾರ್ಥಿಗಳಿಗೆ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ, ರಷ್ಯಾ - ಉಕ್ರೇನ್ ಯುದ್ಧದಿಂದ ಸಂತ್ರಸ್ತರಾಗಿರುವ ವಿದ್ಯಾರ್ಥಿಗಳು ಇತರ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ತಮ್ಮ ಅಧ್ಯಯನ ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಅವರ ಕೋರ್ಸ್‌ಗಳು ಪೂರ್ಣಗೊಂಡ ನಂತರ ಈ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿರುವ ತಮ್ಮ ಮೂಲ ವಿಶ್ವವಿದ್ಯಾಲಯಗಳಿಂದಲೇ ವೈದ್ಯಕೀಯ ಪದವಿಗಳನ್ನು ಪಡೆಯಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.