ಶಾಮ್ಲಿ (ಉತ್ತರ ಪ್ರದೇಶ) :ಕೊಳೆಗೇರಿ ಪ್ರದೇಶದಲ್ಲಿ ಕೊರೊನಾ ಪರೀಕ್ಷೆ ನಡೆಸಲು ತೆರಳಿದ ಆರೋಗ್ಯಾಧಿಕಾರಿಗಳ ತಂಡದ ಮೇಲೆ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.
ಘಟನೆಯಲ್ಲಿ ಆರೋಗ್ಯ ಸಿಬ್ಬಂದಿಯ ಕಾರಿಗೆ ಹಾನಿಯಾಗಿದ್ದು, ಚಾಲಕ ಗಾಯಗೊಂಡಿದ್ದಾರೆ. ಈ ಕುರಿತು ಆರೋಗ್ಯಾಧಿಕಾರಿ ಡಾ. ಮೀನಾಕ್ಷಿ ಧೀಮನ್ ಪೊಲೀಸರಿಗೆ ದೂರು ನೀಡಿದ್ದು, ದಾಳಿ ನಡೆಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಆರೋಗ್ಯ ಇಲಾಖೆ ಕೊರೊನಾ ಪರೀಕ್ಷಾ ಅಭಿಯಾನ ಮಾಡುತ್ತಿದ್ದು, ಡಾ. ಮೀನಾಕ್ಷಿ ನೇತೃತ್ವದಲ್ಲಿ ಕೊಳಗೇರಿ ಪ್ರದೇಶಗಳಲ್ಲಿ ಮುಖ್ಯವಾಗಿ ಪರೀಕ್ಷೆ ನಡೆಸುತ್ತಿದೆ. ನಗರದ ಸಿಟಿ ಬ್ಲಾಕ್ ರಸ್ತೆಯ ದೇವಾ ಬಸ್ತಿ ಕೊಳಗೇರಿಯ ಜನರಿಂದ ಸ್ಯಾಂಪಲ್ಸ್ ಸಂಗ್ರಹಿಸಲು ತೆರಳಿದ ವೇಳೆ ವೈದ್ಯಾಧಿಕಾರಿಗಳ ತಂಡದ ಮೇಲೆ ದಾಳಿ ಮಾಡಲಾಗಿದೆ. ವೈದ್ಯಾಧಿಕಾರಿಗಳ ತಂಡದಲ್ಲಿ ಎಲ್.ಟಿ ನಕುಲ್, ಸ್ಟಾಫ್ ನರ್ಸ್ ರಿತು ಮತ್ತು ಕಾರು ಚಾಲಕ ಪ್ರವೀಣ್ ಇದ್ದರು.
ವೈದ್ಯರ ತಂಡ ಕೊಳಗೇರಿ ಬಳಿ ಸ್ಯಾಂಪಲ್ಸ್ ಸಂಗ್ರಹಿಸುತ್ತಿದ್ದ ವೇಳೆ, ಅರವಿಂದ್ ಎಂಬ ಯುವಕ ಅಸಭ್ಯವಾಗಿ ವರ್ತಿಸಿ ವೈದ್ಯರ ಕೆಲಸಕ್ಕೆ ಅಡ್ಡಿಪಡಿಸಲು ಶುರು ಮಾಡಿದ್ದ. ಈ ವೇಳೆ ಕಾರು ಚಾಲಕ ಮಧ್ಯಪ್ರವೇಶಿಸಲು ಯತ್ನಿಸಿದಾಗ, ಆತನ ಮೇಲೆ ಯುವಕ ಅರವಿಂದ್ ಕೋಲಿನಿಂದ ಹಲ್ಲೆ ನಡೆಸಲು ಪ್ರಾರಂಭಿಸಿದ್ದಾನೆ. ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಆರೋಪಿ ಅರವಿಂದ್ಗಾಗಿ ಹುಡುಕಾಟ ನಡೆಸಿದ್ದಾರೆ.