ಬರ್ಧಮಾನ್ (ಪಶ್ಚಿಮ ಬಂಗಾಳ) :ಕಳೆದ ನಾಲ್ಕು ತಿಂಗಳ ಹಿಂದೆ ಅವಳಿ ಮಕ್ಕಳನ್ನು ಹೊಂದಿದ್ದ ಮಹಿಳೆಯ ಗರ್ಭದಲ್ಲಿ ಭ್ರೂಣವೊಂದು ಸಾವನ್ನಪ್ಪಿತ್ತು. ಇದರಿಂದ ಮೃತ ಭ್ರೂಣವನ್ನು ಹೆರಿಗೆ ಮಾಡಿ ಹೊರ ತೆಗೆದ ಬಳಿಕ ಹೊಕ್ಕುಳಬಳ್ಳಿ ಕಟ್ಟಿಕೊಂಡು ಎರಡನೇ ಮಗುವಿನ ಹೆರಿಗೆ ಮಾಡಿಸುವುದು ವೈದ್ಯರಿಗೆ ಸವಾಲಾಗಿತ್ತು. ಯಾವುದೇ ಕ್ಷಣದಲ್ಲಿ ತಾಯಿ ಮತ್ತು ಮಗುವಿನ ನಡುವೆ ಸೋಂಕು ಹರಡುವ ಸಾಧ್ಯತೆ ಇತ್ತು. ಆದರೆ, ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರು ಗರ್ಭಿಣಿಯನ್ನು 125 ದಿನಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡು ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಬರ್ಧಮಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉಪ ಪ್ರಾಂಶುಪಾಲ ಡಾ. ತಪಸ್ ಘೋಷ್ ಮಾತನಾಡಿ, "ಇದೊಂದು ಅಪರೂಪದ ಪ್ರಕರಣ. 1996ರಲ್ಲಿ ಬಾಲ್ಟಿಮೋರ್‌ನಲ್ಲಿ 90 ದಿನಗಳ ಕಾಲ ಗರ್ಭದಲ್ಲಿ ಮಗುವನ್ನು ಇರಿಸಲಾಗಿತ್ತು. ಆದರೆ 125 ದಿನಗಳ ಕಾಲ ಮಗುವನ್ನು ಇಟ್ಟುಕೊಂಡಿರುವ ದಾಖಲೆ ಇಲ್ಲ" ಎಂದು ಹೇಳಿದರು.
ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಕಾರ, ಕಳೆದ ಜುಲೈನಲ್ಲಿ 41 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಆಕೆಯ ಗರ್ಭದಲ್ಲಿ ಅವಳಿ ಮಕ್ಕಳಿರುವುದು ಪತ್ತೆಯಾಗಿತ್ತು. ಅದರಲ್ಲಿ ಒಂದು ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ. ವೈದ್ಯರು ಮೃತ ಭ್ರೂಣವನ್ನು ಹೆರಿಗೆ ಮಾಡಿಸಿ ಹೊಕ್ಕುಳಬಳ್ಳಿಯನ್ನು ಕಟ್ಟಿ ಗರ್ಭಾಶಯಕ್ಕೆ ಹಿಂತಿರುಗಿಸಿದ್ದರು. ಪರಿಣಾಮ, ಎರಡನೇ ಮಗುವನ್ನು ಆರೋಗ್ಯಕರವಾಗಿ ಮತ್ತು ನೈಸರ್ಗಿಕವಾಗಿ ಹೆರಿಗೆ ಮಾಡಿಸುವಾಗ ಸೋಂಕು ತಗುಲುವ ಸಾಧ್ಯತೆ ಇತ್ತು ಮತ್ತು ಇದು ವೈದ್ಯರಿಗೆ ಸವಾಲಾಗಿತ್ತು. ಆ ಕಾರಣಕ್ಕೆ ಅಪಾಯ ತಪ್ಪಿಸಲು ತಜ್ಞ ವೈದ್ಯಕೀಯ ತಂಡ ರಚಿಸಿ ಆಸ್ಪತ್ರೆಯಲ್ಲಿ ಗರ್ಭಿಣಿಯನ್ನು ಇರಿಸಲಾಗಿತ್ತು.