ಮುಂಬೈ: ಸುಶಾಂತ್ ಸಾವಿನ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್ ಮಾಧ್ಯಮಗಳ ವರದಿ ಬಗ್ಗೆ ಬೇಸರ ಹೊರಹಾಕಿದೆ. ವರದಿ ಮಾಡುವಾಗ ಸಂಯಮ ವಹಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ತಿಳಿಸಿದೆ. ಯಾವುದೇ ಪ್ರಕರಣಗಳಲ್ಲಿ ಮಾಧ್ಯಮ ವಿಚಾರಣೆಯಿಂದ (ಮೀಡಿಯಾ ಟ್ರಯಲ್), ಸಹಜ ನ್ಯಾಯದಾನಕ್ಕೆ ಅಡ್ಡಿಯಾಗುತ್ತದೆ. ಇದರಿಂದ ನ್ಯಾಯಾಂಗದ ಕಾರ್ಯಕ್ಕೂ ಅಡಚಣೆ ಆಗುತ್ತದೆ ಎಂದು ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿ ಅವರಿದ್ದ ಪೀಠ ಈ ಕುರಿತು ಅಭಿಪ್ರಾಯ ತಿಳಿಸಿದೆ. ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ಮಾಧ್ಯಮಗಳನ್ನು ಹೆಸರಿಸಿದ ನ್ಯಾಯಾಲಯ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಈ ಚಾನೆಲ್ಗಳ ವರದಿಗಾರಿಕೆ ಅಪಹಾಸ್ಯಕಾರಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆದರೂ ಈ ಸಂಬಂಧ ಚಾನೆಲ್ಗಳ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳಲು ಕೋರ್ಟ್ ನಿರಾಕರಿಸಿದೆ.
ಮಾಧ್ಯಮದ ಇಂತಹ ಕೆಲಸಗಳು ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮತ್ತು ಅಡಚಣೆಗೆ ಕಾರಣವಾಗುತ್ತವೆ. ಇದರಿಂದ ಕೇಬಲ್ ಟಿವಿ ನೆಟ್‌ವರ್ಕ್ ನಿಯಂತ್ರಣ ಕಾಯ್ದೆಯ ಪ್ರೋಗ್ರಾಂ ಕೋಡ್ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಯಾವುದೇ ವರದಿಗಾರಿಕೆಯು ಪತ್ರಿಕೋದ್ಯಮ ಮತ್ತು ನೈತಿಕ ಮಾನದಂಡಗಳಿಗೆ ಅನುಗುಣವಾಗಿರಬೇಕು. ಇಲ್ಲದಿದ್ದರೆ ಮಾಧ್ಯಮ ಸಂಸ್ಥೆಗಳು ನ್ಯಾಯಾಂಗ ನಿಂದನೆಯ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಆತ್ಮಹತ್ಯೆ ಪ್ರಕರಣಗಳಲ್ಲಿ ವರದಿ ಮಾಡುವಾಗ ಮಾಧ್ಯಮ ಸಂಸ್ಥೆಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸಹ ಈಗಾಗಲೇ ಹೈಕೋರ್ಟ್ ತಿಳಿಸಿದೆ. ಆದರೂ ನ್ಯಾಯಾಲಯದ ಆದೇಶಕ್ಕೆ ಕೆಲ ಮಾಧ್ಯಮಗಳು ಬೆಲೆ ಕೊಟ್ಟಿಲ್ಲ. ಈ ಎಲ್ಲಾ ಘಟನೆ ಹಿನ್ನೆಲೆ ರಜಪೂತ್ ಸಾವಿನ ಕುರಿತು ಮಾಧ್ಯಮ ವಿಚಾರಣೆ ನಡೆಸದಂತೆ ಹಿರಿಯ ವಕೀಲ ಆಸ್ಪಿ ಚಿನೊಯ್, ನಾಗರಿಕರು ಮತ್ತು ನಿವೃತ್ತ ಪೊಲೀಸ್ ಅಧಿಕಾರಿಗಳು ಈ ಸಂಬಂಧ ಪಿಐಎಲ್ ಸಲ್ಲಿಸಿದ್ದಾರೆ.
ಕಳೆದ ವರ್ಷ ಜೂನ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಅವರ ಮನೆಯಲ್ಲಿ ರಜಪೂತ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.