ರಾಂಚಿ(ಜಾರ್ಖಂಡ್): ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮಗಳು 'ಕಾಂಗರೂ ಕೋರ್ಟ್' ಮಾದರಿಯ ವಿಚಾರಣೆಗಳನ್ನು ನಡೆಸುತ್ತಿವೆ. ಅನುಭವಿಕ ನ್ಯಾಯಮೂರ್ತಿಗಳಿಗೇ ಸವಾಲಾಗುವಂಥ ವಿಷಯಗಳ ಬಗ್ಗೆ ಮಾಧ್ಯಮಗಳು 'ಕಾಂಗರೂ ಕೋರ್ಟ್' ನಡೆಸುತ್ತಿವೆ. ನ್ಯಾಯದಾನಕ್ಕಾಗಿ ಕಾಯುತ್ತಿರುವ ವಿಷಯಗಳ ಮೇಲೆ ತಪ್ಪು ಮಾಹಿತಿಗಳನ್ನೊಳಗೊಂಡ ಮತ್ತು ದುರುದ್ದೇಶಪೂರಿತ ಚರ್ಚೆಗಳನ್ನು ನಡೆಸುವುದು ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುತ್ತಿವೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಂಚಿಯಲ್ಲಿನ National University of Study and Research in Law ದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಹಾಗೂ ಬೇಜವಾಬ್ದಾರಿಯಾಗಿ ವರ್ತಿಸುತ್ತಿರುವ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆ ಎರಡು ಹೆಜ್ಜೆ ಹಿಂದೆ ಹೋಗುವಂತೆ ಮಾಡುತ್ತಿವೆ. ಇದ್ದುದರಲ್ಲೇ ಮುದ್ರಣ ಮಾಧ್ಯಮಗಳು ಒಂದಿಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ಮಧ್ಯೆ, ಎಲೆಕ್ಟ್ರಾನಿಕ್ ಮಾಧ್ಯಮಗಳು ಜವಾಬ್ದಾರಿಯನ್ನೇ ಮರೆತಿವೆ ಎಂದಿದ್ದಾರೆ ನ್ಯಾಯಮೂರ್ತಿ ರಮಣ.