ಕರ್ನಾಟಕ

karnataka

ETV Bharat / bharat

ಮೂತ್ರ ವಿಸರ್ಜನೆಯಂಥ ಪ್ರಕರಣ ಪುನರಾವರ್ತನೆಯಾಗದಂತೆ ಕ್ರಮ; ಟಾಟಾ ಸನ್ಸ್​ ಅಧ್ಯಕ್ಷರ ಹೇಳಿಕೆ - ಕ್ಯಾಬಿನ್ ಸಿಬ್ಬಂದಿ ಸೂಕ್ತ ಶಿಸ್ತು ಕ್ರಮ

ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಪ್ರಕರಣ - ಟಾಟಾ ಸನ್ಸ್​ ಆಧ್ಯಕ್ಷ ಎನ್​. ಚಂದ್ರಶೇಖರನ್ ಬೇಸರ - ಇಂಥ ಘಟನೆಗಳು ಮರುಕಳಿಸದಂತೆ ಕ್ರಮದ ಭರವಸೆ

ಮೂತ್ರ ವಿಸರ್ಜನೆಯಂಥ ಪ್ರಕರಣ ಪುನರಾವರ್ತನೆಯಾಗದಂತೆ ಕ್ರಮ; ಟಾಟಾ ಸನ್ಸ್​ ಅಧ್ಯಕ್ಷರ ಹೇಳಿಕೆ
measures-to-prevent-recurrence-of-urinary-incontinence-tata-sons-chairman-statement

By

Published : Jan 8, 2023, 6:55 PM IST

ನವದೆಹಲಿ: ನವೆಂಬರ್ 26, 2022 ರಂದು ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಸಹ-ಪ್ರಯಾಣಿಕರ ಮೇಲೆ ಪ್ರಯಾಣಿಕರೊಬ್ಬರು ಮೂತ್ರ ವಿಸರ್ಜನೆ ಮಾಡಿದ ಘಟನೆಯ ಬಗ್ಗೆ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಭಾನುವಾರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ವಿಮಾನಯಾನ ಕಂಪನಿ ಕೈಗೊಂಡ ಕ್ರಮ ಕಡಿಮೆಯಾಗಿದೆ ಮತ್ತು ಕಂಪನಿ ಇನ್ನಷ್ಟು ತ್ವರಿತವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಅವರು ಹೇಳಿದ್ದಾರೆ.

ಭವಿಷ್ಯದಲ್ಲಿ ಅಂಥ ಯಾವುದೇ ಘಟನೆ ಪುನರಾವರ್ತನೆಯಾಗದಂತೆ ತಡೆಗಟ್ಟುವ ಕ್ರಮಗಳ ಬಗ್ಗೆ ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ಪರಿಶೀಲಿಸಲಿದೆ ಎಂದು ಅವರು ಹೇಳಿದರು. ನವೆಂಬರ್ 26, 2022 ರಂದು ಏರ್ ಇಂಡಿಯಾ ವಿಮಾನ AI102 ನಲ್ಲಿ ನಡೆದ ಘಟನೆಯು ನನಗೆ ಮತ್ತು ಏರ್ ಇಂಡಿಯಾದಲ್ಲಿನ ನನ್ನ ಸಹೋದ್ಯೋಗಿಗಳಿಗೆ ವೈಯಕ್ತಿಕ ದುಃಖದ ವಿಷಯವಾಗಿದೆ ಎಂದು ಚಂದ್ರಶೇಖರನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆ ಬೆಳಕಿಗೆ ಬಂದ ನಂತರ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ, ಏರ್ ಇಂಡಿಯಾ ಕಂಪನಿಯ ಒಡೆತನ ಹೊಂದಿರುವ ಟಾಟಾ ಸನ್ಸ್ ಅಧ್ಯಕ್ಷರು, ಏರ್ ಇಂಡಿಯಾದ ಪ್ರತಿಕ್ರಿಯೆಯು ಇನ್ನಷ್ಟು ತ್ವರಿತವಾಗಿರಬೇಕಿತ್ತು. ನಾವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ, ಯೋಗಕ್ಷೇಮ ಕಾಪಾಡಲು ಟಾಟಾ ಗ್ರೂಪ್ ಮತ್ತು ಏರ್ ಇಂಡಿಯಾ ದೃಢವಾಗಿ ನಿಂತಿವೆ. ಇಂಥ ಅಶಿಸ್ತಿನ ಯಾವುದೇ ಘಟನೆಗಳನ್ನು ತಡೆಗಟ್ಟಲು ಅಥವಾ ಪರಿಹರಿಸಲು ಕೈಗೊಳ್ಳಬೇಕಾದ ಪ್ರತಿಯೊಂದು ಕ್ರಮಗಳನ್ನು ಪರಿಶೀಲಿಸುತ್ತೇವೆ ಮತ್ತು ಸರಿಪಡಿಸುತ್ತೇವೆ ಎಂದು ಹೇಳಿದರು.

ವಿಮಾನದಲ್ಲಿ ಘಟನೆ ನಡೆಯುತ್ತಿರುವಾಗ ಮತ್ತು ವಿಮಾನ ಲ್ಯಾಂಡ್ ಆದ ನಂತರ ಘಟನೆಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಬಹುದಿತ್ತು ಎಂದು ಏರ್ ಇಂಡಿಯಾ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿಕೆ ನೀಡಿದ ಒಂದು ದಿನದ ನಂತರ ಚಂದ್ರಶೇಖರನ್ ಈ ಬಗ್ಗೆ ಮಾತನಾಡಿರುವುದು ಗಮನಾರ್ಹ. ಏರ್ ಇಂಡಿಯಾ ವಿಮಾನದಲ್ಲಿ ಸಹ ಪ್ರಯಾಣಿಕರ ಕೆಟ್ಟ ಕೃತ್ಯಗಳಿಂದಾಗಿ ಇತರ ಪ್ರಯಾಣಿಕರಿಗಾದ ಕೆಟ್ಟ ಅನುಭವಗಳ ಬಗ್ಗೆ ಏರ್​ ಇಂಡಿಯಾ ತೀವ್ರ ಕಳವಳ ಹೊಂದಿದೆ ಎಂದು ಕ್ಯಾಂಪ್​ಬೆಲ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಕ್ಯಾಬಿನ್ ಸಿಬ್ಬಂದಿ ಮತ್ತು ಓರ್ವ ಪೈಲಟ್​ಗೆ ಏರ್ ಇಂಡಿಯಾ ನೋಟಿಸ್ ಜಾರಿ ಮಾಡಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದೆ ಹಾಗೂ ಅವರ ವಿರುದ್ಧ ತನಿಖೆ ನಡೆಸುತ್ತಿದೆ. ವಿಮಾನದಲ್ಲಿ ಆಲ್ಕೋಹಾಲ್ ಪೂರೈಕೆ, ಘಟನೆಯ ನಿರ್ವಹಣೆ, ವಿಮಾನದಲ್ಲಿ ದೂರು ದಾಖಲಾತಿ ಮತ್ತು ದೂರು ನಿರ್ವಹಣೆ ಸೇರಿದಂತೆ ಇತರ ಸಿಬ್ಬಂದಿಯಿಂದ ಲೋಪವಾಗಿದೆಯೇ ಎಂಬ ಬಗ್ಗೆ ವಿಮಾನಯಾನ ಸಂಸ್ಥೆಯು ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ.

ಘಟನೆಯ ಬಗ್ಗೆ ನವೆಂಬರ್ 27 ರಂದು ದೂರು ಬಂದ ನಂತರ ಏರ್ ಇಂಡಿಯಾ ನವೆಂಬರ್ 30 ರಂದು ಪೀಡಿತ ಪ್ರಯಾಣಿಕರ ಕುಟುಂಬದೊಂದಿಗೆ ಪತ್ರವ್ಯವಹಾರವನ್ನು ಪ್ರಾರಂಭಿಸಿತು. ಅಲ್ಲದೆ ಡಿಸೆಂಬರ್ 2 ರಂದು ಅವರಿಗೆ ಟಿಕೆಟ್ ಮೊತ್ತದ ಮರುಪಾವತಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ವಿಮಾನದಲ್ಲಿ ಪ್ರಯಾಣಿಕನೊಬ್ಬ ಅಶಿಸ್ತಿನ ವರ್ತನೆಗಿಳಿದಾಗ ಅವರ ವಿರುದ್ಧ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ವಿಫಲವಾಗಿರುವುದನ್ನು ಗಮನಿಸಿ ವಿಮಾನಯಾನ ನಿಯಂತ್ರಕ ಡಿಜಿಸಿಎ ಶುಕ್ರವಾರ ಮಾರ್ಗಸೂಚಿಗಳನ್ನು ನೀಡಿದೆ. ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನಯಾನ ನಿರ್ವಾಹಕರನ್ನು ಸಂವೇದನಾಶೀಲಗೊಳಿಸುವಂತೆ ವಿಮಾನಯಾನ ಸಂಸ್ಥೆಗಳ ಕಾರ್ಯಾಚರಣೆಯ ಮುಖ್ಯಸ್ಥರಿಗೆ ಡಿಜಿಸಿಎ ಸೂಚಿಸಿದೆ.

ಇದನ್ನೂ ಓದಿ: ಕಾರಿನ ಮೇಲೆ ಮೂತ್ರ ವಿಸರ್ಜನೆ ಮಾಡಿದ ನಾಯಿ; ವೃದ್ಧನ ಮೇಲೆ ಹಲ್ಲೆ ಮಾಡಿ ಪರಾರಿಯಾದ ಕಾರು ಮಾಲೀಕ

ABOUT THE AUTHOR

...view details