ಕೋವಿಡ್ ಲಸಿಕೆ ಕಾರ್ಯಕ್ರಮಕ್ಕಾಗಿ ಕೇಂದ್ರ ಸರ್ಕಾರ ಇದುವರೆಗೆ 4,744 ಕೋಟಿ ರೂ. ಖರ್ಚು ಮಾಡಿದ್ದು, ಇದು ಪ್ರಸಕ್ತ ಹಣಕಾಸು ವರ್ಷದ ಒಟ್ಟು ಲಸಿಕೆ ಬಜೆಟ್‌ನ ಶೇ. 14 % ಕ್ಕಿಂತ ಕಡಿಮೆಯಿದೆ. ಪರಿಣಾಮ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನ ನಿಧಾನಗತಿಯ ವೇಗ ಸೇರಿದಂತೆ ಹಲವು ಹಿನ್ನಡೆಗಳನ್ನು ಅನುಭವಿಸಿದೆ.
ಕೆಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ, ಹೊಸ ಕೋವಿಡ್ ಸೋಂಕಿನ ಪ್ರಕರಣಗಳಲ್ಲಿ ಹಿಂದೆಂದೂ ಕಾಣದಂತಹ ಏರಿಕೆಯನ್ನು ನಿಯಂತ್ರಿಸಲು ಲಸಿಕೆ ಅಭಿಯಾನದಲ್ಲಿ ವೇಗ ಕಾಯ್ದುಕೊಳ್ಳುವುದು ಅತ್ಯಂತ ನಿರ್ಣಾಯಕ ಆಗಿತ್ತು. ಇಂತಹ ಸಮಯದಲ್ಲಿ ಮಂಜೂರಾದ 35,000 ಕೋಟಿ ರೂ. ಗಳಷ್ಟು ಬಜೆಟ್ನ್ನು ನಿಧಾನಗತಿಯಲ್ಲಿ ಬಳಕೆ ಮಾಡುತ್ತಿರುವುದರಿಂದ, ಉಲ್ಬಣಗೊಳ್ಳುತ್ತಿರುವ ಕೋವಿಡ್ ಸೋಂಕಿನ ಪ್ರಕರಣಗಳನ್ನು ಹತೋಟಿಗೆ ತರಲು ಆಗುತ್ತಿಲ್ಲ. ಕಳೆದ ಒಂದು ವಾರದಲ್ಲಿ ಪ್ರತಿದಿನ ಸರಾಸರಿ 3.86 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 3,600 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಎನಿಸಿಕೊಂಡಿರುವ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಗೆ 3639. 67 ಕೋಟಿ ರೂ ಹಾಗೂ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ 1,104.78 ಕೋಟಿ ರೂ. ಪಾವತಿ ಮಾಡಲಾಗಿದೆ. ಸರ್ಕಾರ ಲಸಿಕೆ ಅಭಿಯಾನಕ್ಕಾಗಿ ಒಟ್ಟು 4,744. 45 ಕೋಟಿ ರೂ ಖರ್ಚು ಮಾಡಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.
ಎಸ್ಐಐಗೆ ಪಾವತಿ ಮಾಡಿರುವುದರಲ್ಲಿ ಮೇ, ಜೂನ್ ಹಾಗೂ ಜುಲೈನಲ್ಲಿ 11 ಕೋಟಿ ಡೋಸ್‌ಗಳನ್ನು ಪೂರೈಕೆ ಮಾಡುವ ಫಾಲೋ ಅಪ್ ಆರ್ಡರ್‌ಗಾಗಿ 1732 . 50 ಕೋಟಿ ರೂ.ಗಳ ಮುಂಗಡ ಪಾವತಿ ಸೇರಿದೆ. ಜೊತೆಗೆ ಆರಂಭಿಕ ಆರ್ಡರ್‌ನ 2353.09 ಕೋಟಿ ರೂ.ಗಳ ಬಿಲ್ ಮೊತ್ತದಲ್ಲಿ 15 ಕೋಟಿಗಿಂತ ಹೆಚ್ಚಿನ ಪ್ರಮಾಣದ ಡೋಸ್‌ಗಳನ್ನು ಪೂರೈಕೆ ಮಾಡಲು 1907.17 ಕೋಟಿ ರೂಗಳನ್ನು ಪಾವತಿಸಲಾಗಿದೆ.
ಅನುರಾಗ್ ಠಾಕೂರ್ ಅವರ ಪ್ರಕಾರ, ಸರ್ಕಾರ ಒಟ್ಟು 26. 60 ಕೋಟಿ ಡೋಸ್‌ಗಳಿಗೆ ಆರ್ಡರ್ ನೀಡಿದ್ದು ಎಸ್ಐಐ ಒಟ್ಟು 14, 344 ಕೋಟಿ ಡೋಸ್ ಕೋವಿಶೀಲ್ಡ್ನ್ನು ಸರಬರಾಜು ಮಾಡಿದೆ. ಅಂತೆಯೇ ಕೊವ್ಯಾಕ್ಸಿನ್ ತಯಾರಿಕೆ ಮಾಡುವ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ ಸರ್ಕಾರ ಇದುವರೆಗೆ 8 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲು ಒಟ್ಟು 1104.78 ಕೋಟಿ ರೂ.ಪಾವತಿಸಿದೆ. ಎರಡನೇ ಹಂತದಲ್ಲಿ ಮೇ, ಜೂನ್ ಮತ್ತು ಜುಲೈನಲ್ಲಿ 5 ಕೋಟಿ ಡೋಸ್ ಲಸಿಕೆ ಸರಬರಾಜು ಮಾಡಲೆಂದು 787.5 ಕೋಟಿ ರೂಪಾಯಿಗಳ ಮುಂಗಡ ಪಾವತಿಸಲಾಗಿದೆ.
ಆದರೂ, ಕಳೆದ ಹಣಕಾಸು ವರ್ಷದಲ್ಲಿ ಈ ಎರಡೂ ಲಸಿಕೆ ತಯಾರಿಕಾ ಕಂಪನಿಗಳಿಗೆ ಎಷ್ಟು ಹಣ ಪಾವತಿಸಲಾಗಿದೆ ಮತ್ತು ಈ ವರ್ಷದ 35, 000 ಕೋಟಿ ರೂ ಲಸಿಕೆ ಬಜೆಟ್‌ನಿಂದ ಎಷ್ಟು ಮೊತ್ತದ ಹಣ ಪಾವತಿಸಲಾಗಿದೆ ಎಂಬುದು ಸಚಿವರ ಟ್ವೀಟ್‌ಗಳಿಂದ ಸ್ಪಷ್ಟ ಆಗಿಲ್ಲ .
ಸ್ಥಳೀಯ ತಯಾರಕರಿಗೆ ಆರ್ಡರ್ ನೀಡಲು ಕೇಂದ್ರವು ವಿಳಂಬ ಮಾಡಿದ್ದರಿಂದ ಲಸಿಕೆ ಕಾರ್ಯಕ್ರಮದ ವೇಗ ಮಂದಗತಿಯಲ್ಲಿ ಸಾಗಿ ದೇಶ ಹಿಂದೆಂದೂ ಕಾಣದಷ್ಟು ಕೋವಿಡ್ ಪ್ರಕರಣಗಳ ಏರಿಕೆ ಮತ್ತು ಸಾವುಗಳು ಸಂಭವಿಸಿದವು ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಸಚಿವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಲಸಿಕೆ ಅಭಿಯಾನಕ್ಕೆ ವೇಗ ದೊರಕಿಸಿಕೊಡಲು ವಿದೇಶಗಳಲ್ಲಿ ಬಳಕೆ ಮಾಡುತ್ತಿರುವ ಲಸಿಕೆಗಳನ್ನು ದೇಶದಲ್ಲಿ ಬಳಸಲು ಕೂಡ ಕೇಂದ್ರ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ದೇಶದ ಎರಡು ಲಸಿಕೆ ತಯಾರಿಕಾ ಕಂಪೆನಿಗಳಿಗೆ ಈ ವರ್ಷದ ಮಾರ್ಚ್ ನಂತರ ಯಾವುದೇ ಹೊಸ ಆರ್ಡರ್ ನೀಡಿಲ್ಲ ಎಂಬ ಸುದ್ದಿಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆಯಿತು. ಏ.28 ರಂದು ಕೇಂದ್ರ ಸರ್ಕಾರ ಒಟ್ಟು 16 ಕೋಟಿ ಡೋಸ್ ಲಸಿಕೆ ಪೂರೈಕೆಗಾಗಿ (ಎಸ್ಐಐಗೆ 11 ಕೋಟಿ ಮತ್ತು ಭಾರತ್ ಬಯೋಟೆಕ್‌ಗೆ 5 ಕೋಟಿ) ಕೇಂದ್ರ ಸರ್ಕಾರ ಆರ್ಡರ್ ನೀಡಿದ್ದು, ಅದೇ ದಿನ ರೂ 2,520 ಕೋಟಿ ಮೊತ್ತವನ್ನು ಮುಂಗಡ ಹಣವಾಗಿ ಪಾವತಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಲಸಿಕೆಗೆಂದು ಮೀಸಲಿಟ್ಟ ಒಟ್ಟು 35, 000 ಕೋಟಿ ರೂಪಾಯಿಗಳಲ್ಲಿ ಈಗ ಮಾಡಿರುವ ಪಾವತಿ ಕೇವಲ ಶೇ 7.2 % ರಷ್ಟಿದೆ.
ಒಟ್ಟು ಹಣ:
ಪ್ರಸಕ್ತ ಹಣಕಾಸು ವರ್ಷದ ಕೇಂದ್ರ ಬಜೆಟ್ ಮಂಡನೆ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಲಸಿಕೆ ಅಭಿಯಾನಕ್ಕೆ 35, 000 ಕೋಟಿ ರೂ ಮೀಸಲಿಟ್ಟಿರುವುದಾಗಿ ಘೋಷಿಸಿದ್ದರು.