ತಿರುವನಂತಪುರಂ( ಕೇರಳ):ಉಕ್ರೇನ್‌ನಲ್ಲಿ ಭಾರತದ ಸುಮಾರು 18 ಸಾವಿರ ಜನರಿದ್ದಾರೆ ಎಂದು ವಿದೇಶಾಂಗ ಇಲಾಖೆಯ ರಾಜ್ಯಖಾತೆಯ ಸಚಿವ ವಿ ಮುರಳೀಧರನ್ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿರುವ ಹಿನ್ನೆಲೆಯಲ್ಲಿ ತ್ರಿಶೂರ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರದ ರಾಜ್ಯಖಾತೆ ಸಚಿವರು, ಉಕ್ರೇನ್‌ನಲ್ಲಿರುವ ಎಲ್ಲ ವಿದ್ಯಾರ್ಥಿಗಳು ಜನರ ಸುರಕ್ಷತೆ ಬಗ್ಗೆ ಮೊದಲ ಆದ್ಯತೆ ನೀಡುತ್ತಿದ್ದು, ಈ ಸಂಬಂಧ ಅಲ್ಲಿನ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ 18 ಸಾವಿರ ಜನರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ಕರೆತರುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಇದೇ ವೇಳೆ ಭರವಸೆ ನೀಡಿದರು.
ಕಿವಾ ಏರ್ಪೋರ್ಟ್ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರೂ ಉಕ್ರೇನ್ ರಾಜಧಾನಿಯಿಂದ ಬೇರೆ ವ್ಯವಸ್ಥೆಗಳನ್ನು ಮಾಡಿಕೊಂಡು ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮರಳಿ ವಾಪಸ್ ಕರೆತರುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ, ಈ ಸಂಬಂಧ ಎಲ್ಲ ಮಾಹಿತಿಯನ್ನು ರವಾನಿಸಲಾಗಿದೆ. ಉಕ್ರೇನ್ ವಾಯುಪ್ರದೇಶವನ್ನು ಮುಚ್ಚಿರುವ ಕಾರಣ ವಿಶೇಷ ವಿಮಾನಗಳ ವೇಳಾಪಟ್ಟಿಯನ್ನು ರದ್ದುಗೊಳಿಸಲಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ ಎಂದರು.