ನವದೆಹಲಿ:ಪಾಸ್‌ಪೋರ್ಟ್ ವಿತರಣೆಯ ಸಂದರ್ಭದಲ್ಲಿ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಮತ್ತು ತ್ವರಿತಗೊಳಿಸಲು 'mPassport ಪೊಲೀಸ್ ಅಪ್ಲಿಕೇಶನ್' ಬಿಡುಗಡೆ ಮಾಡಲಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಇದನ್ನು ಪರಿಚಯಿಸಿತು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿ ಪೊಲೀಸ್ ವಿಶೇಷ ಶಾಖೆಯ 350 ಸಿಬ್ಬಂದಿಗೆ ಮೊಬೈಲ್ ಟ್ಯಾಬ್ಲೆಟ್‌ಗಳನ್ನು ವಿತರಿಸಿದ್ದಾರೆ. ಈ ಡಿವೈಸ್ಗಳು ಇನ್ನು ಮುಂದೆ ಪೊಲೀಸ್ ವೆರಿಫಿಕೇಶನ್ ಮತ್ತು ವೆರಿಫಿಕೇಶನ್ ವರದಿ ಸಲ್ಲಿಕೆಯನ್ನು ಸಂಪೂರ್ಣ ಪೇಪರ್‌ಲೆಸ್ ಮಾಡಲಿವೆ ಎಂದು ದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (RPO) ಶುಕ್ರವಾರ ಹೇಳಿದೆ.
ಟ್ಯಾಬ್ಲೆಟ್‌ಗಳನ್ನು ಬಳಸಿ ವೆರಿಫಿಕೇಶನ್ ಮಾಡುವುದರಿಂದ ವೆರಿಫಿಕೇಶನ್ಗೆ ತಗಲುವ ಅವಧಿಯು ಈಗಿರುವ 15 ದಿನಗಳಿಂದ ಐದು ದಿನಗಳಿಗೆ ಕಡಿಮೆಯಾಗಲಿದೆ. ಇದರಿಂದ ಪಾಸ್‌ಪೋರ್ಟ್ ನೀಡುವ ಒಟ್ಟಾರೆ ಸಮಯಾವಧಿಯು ಹತ್ತು ದಿನಗಳಷ್ಟು ಕಡಿಮೆಯಾಗಲಿದೆ ಎಂದು ದೆಹಲಿಯ ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿ ಅಭಿಷೇಕ್ ದುಬೆ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ದೆಹಲಿಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ, ತ್ವರಿತ ಸೇವೆ ನೀಡಲು ಮತ್ತು ಡಿಜಿಟಲ್ ಇಂಡಿಯಾಗೆ ತಾನು ಬದ್ಧವಾಗಿರುವುದಾಗಿ ತಿಳಿಸಿದೆ. mPassport ಪೊಲೀಸ್ ಆ್ಯಪ್ ಸಹಾಯದಿಂದ ವೆರಿಫಿಕೇಶನ್ ಪ್ರಕ್ರಿಯೆ ಕೇವಲ ಐದು ದಿನಗಳಲ್ಲಿ ಮುಗಿಯಲಿದೆ ಎಂದು ಅದು ಹೇಳಿದೆ.
ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸ್ ವಿಶೇಷ ಶಾಖೆಯ 350 ಸಿಬ್ಬಂದಿಗೆ ಮೊಬೈಲ್ ಟ್ಯಾಬ್ಲೆಟ್ ವಿತರಣೆ ಮಾಡಿದ್ದಾರೆ. ಈ ಟ್ಯಾಬ್ಲೆಟ್ಗಳಿಂದ ಸಂಪೂರ್ಣ ಪಾಸ್‌ಪೋರ್ಟ್ ಅಪ್ಲಿಕೇಶನ್ ವೆರಿಫಿಕೇಶನ್ ಪ್ರಕ್ರಿಯೆಯು ಡಿಜಿಟಲ್ ಹಾಗೂ ಪೇಪರ್‌ಲೆಸ್ ಆಗಲಿದೆ ಮತ್ತು ವೆರಿಫಿಕೇಶನ್ ಸಮಯಾವಧಿ 5 ದಿನಗಳಿಗೆ ಇಳಿಕೆಯಾಗಲಿದೆ ಎಂದು ದೆಹಲಿ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಮಗುವಿಗೆ ಪಾಸ್‌ಪೋರ್ಟ್ ಕೊಡಿಸಲು ಹೋರಾಟ: ಪರಿತ್ಯಕ್ತನಾಗಿರುವ ಅಫ್ಘಾನಿಸ್ತಾನದ ಒಂದು ವರ್ಷದ ಬಾಲಕನನ್ನು ದತ್ತು ಕೇಂದ್ರಕ್ಕೆ ಸೇರಿಸಲು ಸಾಧ್ಯವಾಗುವಂತೆ ಆತನಿಗೆ ಪಾಸ್‌ಪೋರ್ಟ್ ನೀಡಲು ಸಹಾಯ ಮಾಡುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ (ಎಂಎಚ್‌ಎ) ನೋಟಿಸ್ ಜಾರಿ ಮಾಡಿದೆ. ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ಫೆಬ್ರವರಿ 14 ರಂದು ಪುಣೆ ಮೂಲದ ದತ್ತು ಸಂಸ್ಥೆ ಭಾರತೀಯ ಸಮಾಜ ಸೇವಾ ಕೇಂದ್ರವು ಮಗುವಿಗೆ ಭಾರತೀಯ ಪಾಸ್‌ಪೋರ್ಟ್ ನೀಡಲು ಗೃಹಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ಈ ನೋಟಿಸ್ ಜಾರಿ ಮಾಡಿದೆ.
ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅಥವಾ ಅವರ ಕಚೇರಿಯ ವಕೀಲರು ಸಹಾಯ ಮಾಡುವಂತೆ ಪೀಠವು ಕೋರಿದೆ. ಅಟ್ಲಾಸ್ ಎಂದು ಹೆಸರಿಸಲಾಗಿರುವ ಈಗ ಒಂದು ವರ್ಷದ್ದಾಗಿರುವ ಮಗುವನ್ನು ಅದು ಕೇವಲ ಒಂದು ದಿನದ ಮಗುವಾಗಿದ್ದಾಗ ಸೆಪ್ಟೆಂಬರ್ 9, 2021 ರಂದು ಅದರ ಅಫ್ಘಾನಿಸ್ತಾನ ಮೂಲದ ಜೈವಿಕ ಪೋಷಕರು ತನಗೆ ಹಸ್ತಾಂತರ ಮಾಡಿದ್ದರು ಎಂದು ಪುಣೆಯ ದತ್ತು ಸ್ವೀಕಾರ ಏಜೆನ್ಸಿ ನ್ಯಾಯಾಲಯಕ್ಕೆ ಹೇಳಿದೆ. ಮಗು ಬಾರತದಲ್ಲಿ ಜನಿಸಿರುವುದರಿಂದ ಅದು ಭಾರತದ ಪಾಸ್‌ಪೋರ್ಟ್ ಪಡೆಯಲು ಅರ್ಹವಾಗಿದೆ ಎಂದು ದತ್ತುಸಂಸ್ಥೆ ವಾದಿಸಿದೆ.
ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವ ವಿನಾಶಕ್ಕೆ ಉದ್ಯಮಿ ಸೊರೊಸ್ ಹುನ್ನಾರ: ಬಿಜೆಪಿ ವಾಗ್ದಾಳಿ