ನವದೆಹಲಿ: ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಸ್ಪಷ್ಟಪಡಿಸಿದೆ.
ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಂ ಬಾಗ್ಚಿ, ಕಂದಹಾರ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಅನ್ನು ಮುಚ್ಚಲಾಗಿಲ್ಲ. ಕಂದಹಾರ್ ನಗರದ ಸಮೀಪ ತಾಲಿಬಾನಿಗಳ ಪ್ರಭಾವ ಹೆಚ್ಚಿರುವ ಕಾರಣ ಭಾರತದ ಸಿಬ್ಬಂದಿಯನ್ನು ಸದ್ಯಕ್ಕೆ ಮರಳಿ ಕರೆತರಲಾಗಿದೆ. ಇದು ಕೇವಲ ತಾತ್ಕಾಲಿಕ ಕ್ರಮ. ರಾಯಭಾರಿ ಕಚೇರಿ ನಮ್ಮ ಸ್ಥಳೀಯ ಸಿಬ್ಬಂದಿ ಸದಸ್ಯರ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಕಾಬೂಲ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ಮೂಲಕ ವೀಸಾ ಮತ್ತು ರಾಯಭಾರಿ ಸೇವೆಗಳನ್ನು ನಿರಂತರವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅಫ್ಘಾನಿಸ್ತಾನದಲ್ಲಿ ಬಿಗಡಾಯಿಸುತ್ತಿರುವ ಭದ್ರತಾ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಮ್ಮ ಸಿಬ್ಬಂದಿಯ ಸುರಕ್ಷತೆ ಹಾಗೂ ಭದ್ರತೆಯು ನಮ್ಮ ಪ್ರಮುಖ ಆದ್ಯತೆ ಎಂದು ಹೇಳಿದರು.
ಅಫ್ಘಾನಿಸ್ತಾನಕ್ಕೆ ಭೇಟಿ ನೀಡುವ, ಉಳಿದುಕೊಳ್ಳುವ ಮತ್ತು ಕೆಲಸ ಮಾಡುವ ಭಾರತೀಯರಿಗೆ ದೇಶದಲ್ಲಿ ಅನಗತ್ಯ ಪ್ರಯಾಣವನ್ನು ತಪ್ಪಿಸಲು ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ ಮತ್ತು ಸಲಹೆ ನೀಡಲಾಗಿದೆ. ಯುಎಸ್ ಆಕ್ರಮಣದ ನಂತರ 2001 ರಲ್ಲಿ ತಾಲಿಬಾನ್ ಪತನದ ನಂತರ ಭಾರತ ಅಫ್ಘಾನಿಸ್ತಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅಫ್ಘಾನಿಸ್ತಾನದ ಪುನರಾಭಿವೃದ್ಧಿಗೆ ಮತ್ತು ಸಂಸತ್ತಿನ ಕಟ್ಟಡದ ನಿರ್ಮಾಣದಲ್ಲಿ ಮತ್ತು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಹಲವಾರು ರಸ್ತೆಗಳಿಗೆ ಭಾರತವು ಅಪಾರ ಕೊಡುಗೆ ನೀಡಿದೆ.
ಇದನ್ನೂಓದಿ: ಆಫ್ಘಾನಿಸ್ತಾನದ ಶೇಕಡಾ 85ರಷ್ಟು ಭೂಪ್ರದೇಶ ನಮ್ಮ ಅಧೀನದಲ್ಲಿದೆ: ತಾಲಿಬಾನ್
ಸೆಪ್ಟೆಂಬರ್ 11, 2001ರ ನಂತರ ಒಸಾಮಾ ಬಿನ್ ಲಾಡೆನ್ ಅಮೆರಿಕದ ಮೇಲೆ ನಡೆಸಿದ ದಾಳಿಯ ನಂತರ, 2001 ರಲ್ಲಿ ಅಫ್ಘಾನಿಸ್ತಾನವನ್ನು ಯುಎಸ್ ಆಕ್ರಮಿಸಿತು. ಪಾಕಿಸ್ತಾನಕ್ಕೆ ಪರಾರಿಯಾದ ಬಿನ್ ಲಾಡೆನ್ 2011 ರ ಮೇನಲ್ಲಿ ಅಮೆರಿಕ ವಿಶೇಷ ಸೇನಾಪಡೆಯಿಂದ ಕೊಲ್ಲಲ್ಪಟ್ಟಿದ್ದ.
ಅಫ್ಘಾನಿಸ್ತಾನದ ಪಶ್ಚಿಮ ಭಾಗದ ಬಹುತೇಕ ಭಾಗವನ್ನು ವಶಪಡಿಸಿಕೊಂಡಿರುವ ತಾಲಿಬಾನ್, ದಕ್ಷಿಣ ಭಾಗದ ಪ್ರದೇಶಗಳನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಭಾರತ ತನ್ನ ರಾಯಭಾರಿ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚುವ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಂಇಎ ವಕ್ತಾರ ಅರಿಂದಂ ಬಾಗ್ಚಿ ಸ್ಪಷ್ಟನೆ ನೀಡಿದ್ದಾರೆ.