ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (ಎಂಸಿಡಿ)ಗೆ ಇಂದು ಮತದಾನ ನಡೆಯುತ್ತಿದ್ದು, ಇಲ್ಲಿ ಕೂಡ ಮತದಾರರ ನಾಪತ್ತೆ ಆರೋಪ ಕೇಳಿಬಂದಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣೆಯಾದ ಕಾರಣ ಮತ ಚಲಾಯಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇಂದು ನನ್ನ ಮತ ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದಾಗ ಮತದಾರರ ಪಟ್ಟಿಯಿಂದ ಹೆಸರು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ನನ್ನ ಹೆಸರು ಮಾತ್ರವಲ್ಲ, ಉತ್ತರ ಪ್ರದೇಶದಂತೆಯೇ ದೆಹಲಿಯಲ್ಲೂ ದಲಿತ ಮತ್ತು ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದು ಅನಿಲ್ ಚೌಧರಿ ಆರೋಪಿಸಿದ್ದಾರೆ.
ಇದನ್ನೂ ಓದಿ:ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ತ್ರಿಕೋನ ಸ್ಪರ್ಧೆಗೆ ಅಖಾಡ ಸಜ್ಜು
ಈ ಹಿಂದಿನ ಚುನಾವಣೆಯಲ್ಲಿ ನಾನು ಮತ ಚಲಾಯಿಸಿದ್ದೆ. ಜೊತೆಗೆ ಮಾಜಿ ಶಾಸಕರಾಗಿದ್ದ ಕಾರಣ ನಾನು 'ಗುರುತು' ಮತದಾರರಾಗಿದ್ದು, ನನ್ನ ಹೆಸರನ್ನು ತೆಗೆದುಹಾಕಲು ಸಾಧ್ಯವಿಲ್ಲ. ಆದರೂ, ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ, ಮತದಾರರ ಪಟ್ಟಿಯಿಂದ ಅನೇಕ ಜನರು ಕೂಡ ತಮ್ಮ ಹೆಸರನ್ನು ತೆಗೆದುಹಾಕಲಾಗಿದೆ ಎಂದು ನಿರಂತರವಾಗಿ ಕಾಂಗ್ರೆಸ್ ನಿಯಂತ್ರಣ ಕೊಠಡಿಗೆ ಕರೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರಿಗೆ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೆಲಸವಾಗುತ್ತಿದ್ದು, ಇದಕ್ಕೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷ ಕಾರಣವಾಗಿದೆ. ಇಷ್ಟೇ ಅಲ್ಲ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೌನ ವಹಿಸಿರುವುದು ಪ್ರಶ್ನಾರ್ಹವಾಗಿದೆ ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದಾರೆ.
ಎಂಸಿಡಿಯ 250 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದ್ದು, ಸಂಜೆ 5.30ಕ್ಕೆ ಮುಕ್ತಾಯವಾಗಲಿದೆ. ಡಿಸೆಂಬರ್ 7ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬೀಳಲಿದೆ.
ಇದನ್ನೂ ಓದಿ:ಇಂದು ಸಂಜೆ ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ