ಲಖನೌ (ಉತ್ತರಪ್ರದೇಶ):ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ಮುಂದಾಳತ್ವದ ಐಎನ್ಡಿಐಎ (I.N.D.I.A) ಭರ್ಜರಿ ಸಿದ್ಧತೆ ನಡೆಸುತ್ತಿವೆ. 29 ವಿಪಕ್ಷಗಳನ್ನು ಸೇರಿಸಿಕೊಂಡು ಕಾಂಗ್ರೆಸ್ ಬಿಹಾರ, ಬೆಂಗಳೂರಿನಲ್ಲಿ ಸಭೆ ನಡೆಸಿದ್ದರೆ, ಇತ್ತ ದೆಹಲಿಯಲ್ಲಿ ಬಿಜೆಪಿ 39 ಎನ್‌ಡಿಎ ಅಂಗಪಕ್ಷಗಳನ್ನು ಗುಡ್ಡೆ ಹಾಕಿ ಬಲಪ್ರದರ್ಶನ ಮಾಡಿದೆ. ಈ ಮಧ್ಯೆ ಯಾರಿಗೂ ಬೇಡ ಎಂಬಂತೆ ಕರ್ನಾಟಕದ ಜೆಡಿಎಸ್ ಮತ್ತು ಉತ್ತರಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರ ಬಿಎಸ್‌ಪಿ ಯಾವ ಬಣದಲ್ಲೂ ಕಾಣಿಸಿಕೊಂಡಿಲ್ಲ.
ಈ ಮಧ್ಯೆ ಲೋಕಸಭೆ ಚುನಾವಣೆಗೆ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ಹೇಳಿಕೆ ನೀಡಿದ್ದರೆ, ಜೆಡಿಎಸ್ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಮುಂದೆ ಯಾವುದಾದರೂ ಬಣಕ್ಕೆ ಸೇರಲಿದೆಯಾ ಅಥವಾ ಸ್ವತಂತ್ರ ಸ್ಪರ್ಧೆಯೇ ಎಂಬುದು ಕುತೂಹಲದ ಪ್ರಶ್ನೆ.
ಏಕಾಂಗಿ ಹೋರಾಟ- ಮಾಯಾವತಿ:ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, ತಮ್ಮ ಪಕ್ಷವು 26 ಸದಸ್ಯ ಪಕ್ಷಗಳ ಇಂಡಿಯಾ ಮೈತ್ರಿ ಅಥವಾ 39 ಸದಸ್ಯರ ಎನ್‌ಡಿಎ ಒಕ್ಕೂಟದೊಂದಿಗೆ ಸೇರಿಲ್ಲ. ಯಾವ ಗುಂಪಿನೊಂದಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಎರಡೂ ಬಣಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಮತ್ತು ನಾವು ದೇಶಾದ್ಯಂತ ಸಭೆಗಳನ್ನು ನಡೆಸುತ್ತಿದ್ದೇವೆ ಎಂದು ಅವರು ವಿಡಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.